ಚಿಕ್ಕಮಗಳೂರು: ಮರದಿಂದಲೇ ನಿರ್ಮಾಣವಾದ 1915 ನೇ ಇಸವಿಯ ವಿಕ್ಟೋರಿಯಾ ರಾಣಿ ಕಾಲದ ದುಬಾರಿ ಬೆಲೆಯ ಟೆಲಿಸ್ಕೋಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕೊಳವೆ ರೀತಿಯ ಸುಮಾರು ಎರಡು ಅಡಿಗೂ ಹೆಚ್ಚು ಉದ್ದವಿರುವ ಟೆಲಿಸ್ಕೋಪ್ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಹೆಬ್ಬಾಳ ಸಮೀಪದ ಸೆಕೆಂಡ್ ಸ್ಟೇಜ್ ನಿವಾಸಿ ಕೆಂಪರಾಜ್ ಬಂಧಿತ ಆರೋಪಿ.
ಇದು ವಿಕ್ಟೋರಿಯಾ ರಾಣಿ ಕಾಲದ ವಿಕ್ಟೋರಿಯನ್ ಮೆರಿನ್ ಟೆಲಿಸ್ಕೋಪ್ ಎಂದು ತಿಳಿದು ಬಂದಿದೆ. ರಿಯಲ್ ಎಸ್ಟೇಟ್ ಕೆಲಸವನ್ನು ಮಾಡುವ ಬಂಧಿತ ಕೆಂಪರಾಜು ಈ ಟೆಲಿಸ್ಕೋಪನ್ನು ಮೈಸೂರಿನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದರಂತೆ. ಅದನ್ನ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ ಸುಮಾರು 15 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಮಾಹಿತಿ ತಿಳಿದ ಕಡೂರು ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು, ಟೆಲಿಸ್ಕೋಪನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸೆರೆ: ವಿವಿಧೆಡೆ ಕಳ್ಳತನ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಿವಾಸಿ ಅಹ್ಮದ್ ಕಬೀರ್ ಬಂಧಿತ ಆರೋಪಿ. ಆರೋಪಿಯು ಮೂಲತಃ ಚಿಕ್ಕಮಗಳೂರು ನಗರದ ಉಪ್ಪಳ್ಳಿ ನಿವಾಸಿ ಎಂದು ತಿಳಿದುಬಂದಿದೆ.
ಗಸ್ತಿನಲ್ಲಿದ್ದ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈತನ ಕಾರು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಒಂದು ಪಿಸ್ತೂಲ್, 12 ಜೀವಂತ ಗುಂಡುಗಳು, ಎರಡು ಮ್ಯಾಗ್ಜಿನ್, ಕಬ್ಬಿಣದ ರಾಡ್, ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಪತ್ತೆಯಾಗಿವೆ. ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿಕ್ಕಮಗಳೂರಿನಲ್ಲಿ 9 ಪ್ರಕರಣ, ಶಿವಮೊಗ್ಗದಲ್ಲಿ ಒಂದು ಪ್ರಕರಣ, ಇತ್ತೀಚೆಗೆ ಬಾಳೆಹೊನ್ನೂರಿ ಕೃಷಿ ಪತ್ತಿನ ಸಹಕಾರ ಸಂಘದ ಕಳ್ಳತನ ಪ್ರರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಕಾರಿನಲ್ಲಿ ಕಬ್ಬಿಣದ ರಾಡ್, ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಆರೋಪಿ ಮೂಲತಃ ಚಿಕ್ಕಮಗಳೂರು ನಗರದ ಉಪ್ಪಳ್ಳಿ ನಿವಾಸಿ. ಹಾಲಿ ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದಾನೆ. ಪೊಲೀಸರು ವಿಚಾರಿಸಿದಾಗ ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವುದಾಗಿ ಹೇಳಿದ್ದಾನೆ. ಹೊರ ಜಿಲ್ಲೆಗಳಿಗೆ ಹೋಗಿ ದರೋಡೆ ಮಾಡಿ ಮತ್ತೆ ಬೆಂಗಳೂರಿಗೆ ಬಂದು ಎಂದಿನಂತೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದನಂತೆ.
ಬಂಧಿತ ಆರೋಪಿಯಿಂದ ಸುಮಾರು 20 ಲಕ್ಷ ಮೌಲ್ಯದ 292 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, ಒಂದು ಕಾರು ಹಾಗೂ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಈ ಹಿಂದೆ 8 ಪ್ರಕರಣಗಳಲ್ಲಿ ಭಾಗಿಯಾದ್ದ. ಆರೋಪಿ ಆತ್ಮರಕ್ಷಣೆಗಾಗಿ ಪಿಸ್ತೂಲ್ನ್ನು ಹೊಂದಿರುವುದಾಗಿ ಹೇಳಿದ್ದ, ಪಿಸ್ತೂಲ್ ಹೇಗೆ ಸಿಕ್ಕಿದೆ ಎಂಬುದರ ಬಗ್ಗೆ ಪೊಲೀಸರು ವಿಚಾರಿಸಿದಾಗ, ಬೆಂಗಳೂರಿನ ಡಿಜೆ ಹಳ್ಳಿಯ ಕಾರ್ಪೆಂಟರ್ ವಾಸೀಮ್ ಎಂಬುವನ ಕಡೆಯಿಂದ ಗನ್ ಪಡೆದುಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಕುರಿತು ಹೆಚ್ಚಿನ ತಿನಿಖೆ ನಡೆಸುತ್ತೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:3.2 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ.. ಮಂಗಳೂರು ಸಿಸಿಬಿಯಿಂದ ಇಬ್ಬರ ಬಂಧನ