ಚಿಕ್ಕಮಗಳೂರು: ಪೊಲೀಸರ ಜೀಪನ್ನೇ ಕಳ್ಳನೋರ್ವ ಕದ್ದುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಠಾಣೆಯ ಜೀಪ್ ನಿಲ್ಲಿಸಿ, ಮೆಡಿಕಲ್ ಸ್ಟೋರ್ಗೆ ಹೋಗಿ ಬರುವಷ್ಟರಲ್ಲಿ ಖದೀಮ ಜೀಪ್ ಹಾರಿಸಿಕೊಂಡು ಹೋಗಿದ್ದಾನೆ.
ಕಳ್ಳ ಜೀಪನ್ನು ಕಡೂರು ರಸ್ತೆಯ ಮಾರ್ಗವಾಗಿ ತೆಗೆದುಕೊಂಡು ಹೋಗಿದ್ದು, ಏಕಾಂಗಿಯಾಗಿ 5 ಕಿ.ಮೀ. ದೂರ ಪ್ರಯಾಣಿಸಿ ನಂತರ ನಗರದ ಹೊರವಲಯದ ಲಕ್ಯಾ ಕ್ರಾಸ್ ಬಳಿ ಇನ್ನೊಂದು ಕಾರಿಗೆ ಗುದ್ದಿದ್ದಾನೆ. ನಂತರ ರಸ್ತೆಯ ಪಕ್ಕದಲ್ಲಿದ್ದಂತಹ ಕಲ್ಲಿಗೆ ಜೀಪ್ ಗುದ್ದಿದ್ದು, ಜೀಪ್ ಆಫ್ ಆಗಿ ಅಲ್ಲಿಯೇ ನಿಂತಿದೆ.
ಕೂಡಲೇ ಜೀಪ್ನಿಂದ ಕೆಳಗೆ ಇಳಿದಿರುವ ಕಳ್ಳ, ಕಾಡಿನೊಳಗೆ ಓಡಿ ಹೋಗಿದ್ದಾನೆ. ಈ ಕೃತ್ಯ ಯಾರು ಎಸಗಿದ್ದಾರೆ ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಿನಲ್ಲಿ ಕಳ್ಳನನ್ನು ಹುಡಕುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.