ಚಿಕ್ಕಮಗಳೂರು: ಬೆಂಗಳೂರಿನ ಗಲಭೆ ಮೇಲ್ನೋಟಕ್ಕೆ ಪೊಲೀಸ್ ಇಲಾಖೆಯ ವರದಿ ಪ್ರಕಾರ ಪೂರ್ವನಿಯೋಜಿತ ಕೃತ್ಯವೆಂದು ಸ್ಪಷ್ಟವಾಗುತ್ತದೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸಂಘಟಿತವಾಗಿ ಕೋಮುಗಲಭೆ ಸೃಷ್ಟಿಸುವ ಉದ್ದೇಶ ಹಾಗೂ ಕಾಂಗ್ರೆಸ್ನ ಬಣ ರಾಜಕೀಯ ಮತ್ತು ಒಳ ರಾಜಕೀಯ ಎಲ್ಲವೂ ಸೇರಿ ಎಸ್ಡಿಪಿಐ ಕುಮ್ಮಕ್ಕಿನೊಂದಿಗೆ ಡಿ.ಜೆ.ಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ನ್ಯಾಯಾಂಗ ತನಿಖೆಯ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.
ಕೆಲವರು ಗಲಭೆ ಎಬ್ಬಿಸುವ ಉದ್ದೇಶದಿಂದ ಕಾಯುತ್ತಿದ್ದರು. ಸಿಎಎ ಸಂದರ್ಭದಲ್ಲಿ ಗಲಭೆ ಎಬ್ಬಿಸುವ ಸಂಚು ರೂಪಿಸಿದ್ದರು. ಆಗ ಅಂದುಕೊಂಡಿದ್ದು ಆಗಲಿಲ್ಲ. ರಾಮ ಮಂದಿರ ತೀರ್ಪು ಬರುವ ಸಂದರ್ಭದಲ್ಲಿ ಗಲಭೆ ಎಬ್ಬಿಸಲು ಪ್ರಯತ್ನ ಮಾಡಿದ್ದರು. ಆಗಲೂ ಸಾಧ್ಯವಾಗಲಿಲ್ಲ. ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯುವ ಸಂದರ್ಭದಲ್ಲಿ ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದರು. ಈಗ ಫೇಸ್ಬುಕ್ ಪೋಸ್ಟ್ ಆಧಾರದ ಮೇಲೆ ಗಲಭೆ ಎದ್ದಿದೆ. ಇದನ್ನು ಸಂಘಟಿತವಾಗಿ ಬಳಸಿಕೊಂಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.