ಚಿಕ್ಕಮಗಳೂರು: ಮಿಸ್ಟರ್ ಚಿಕ್ಕಮಗಳೂರು ಆಗ್ಬೇಕು ಅನ್ನೋ ಕನಸು ಕಂಡು ಅದಕ್ಕೆ ತಕ್ಕಂತೆ ಕಸರತ್ತು ಮಾಡುತ್ತಿದ್ದ ಯುವಕನ ಕನಸುಗಳೆಲ್ಲಾ ಆತನೊಂದಿಗೆ ಸಮಾಧಿಯಾಗಿವೆ.
ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ನಡೆದ ಕೊಲೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿ ಕೊಲೆಗೀಡಾಗಿದ್ದು 22 ವರ್ಷದ ಬಾಡಿ ಬಿಲ್ಡರ್ ಮನೋಜ್ ಎಂಬ ಯುವಕ. ಎರಡು ದಿನಗಳ ಹಿಂದೆ ಮನೋಜ್ ತಲೆಗೆ ಬಲವಾದ ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಲಾಗಿತ್ತು. ಚಿಕ್ಕಮಗಳೂರಿನಿಂದ-ಬೆಂಗಳೂರಿಗೆ ಕರೆದುಕೊಂಡು ಹೋದ್ರೂ ಮನೋಜ್ನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆತ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ನಡೆದದ್ದಾದರೂ ಏನು?
ತನ್ನ ಸ್ನೇಹಿತನ ತಂಗಿಗೆ ಇನ್ನೊಬ್ಬ ಹುಡುಗ ಮೆಸೇಜ್ ಮಾಡ್ತಿದ್ದಾನೆ, ಸಲುಗೆಯಿಂದ ಇದ್ದಾನೆ ಅನ್ನೋ ವಿಚಾರ ತಿಳಿದು ವಾರ್ನಿಂಗ್ ಕೊಡಲು ಮನೋಜ್ ಸೇರಿ ನಾಲ್ಕೈದು ಜನರು ಹೋಗಿದ್ರು. ಅಲ್ಲಿ ಮಾತಿಗೆ ಮಾತು ಬೆಳೆದು ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ನಡೆದ ಮಾರಾಮಾರಿಯಲ್ಲೇ ಮನೋಜ್ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆ ದಾಖಲಾಗಿ ಸಾವನ್ನಪ್ಪಿದ್ದಾನೆ.
ಬದುಕಿನ ಯಾತ್ರೆ ಮುಗಿಸಿರೋ ಮನೋಜ್ ತನ್ನ ದೇಹವನ್ನ ದಂಡಿಸಿ ಪೈಲ್ವಾನ್ ಆಗೋ ಕನಸು ಕಂಡಿದ್ದ. ಮಿಸ್ಟರ್ ಚಿಕ್ಕಮಗಳೂರು ಆಗಬೇಕು ಅಂತಾ ಬೆಂಗಳೂರಿನಿಂದ ಕೆಲಸ ಬಿಟ್ಟು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರಿಗೆ ಹಿಂದಿರುಗಿದ್ದ. ಅದೇ ಉತ್ಸಾಹ, ಹುಮ್ಮಸ್ಸಿನಿಂದ ದಿನನಿತ್ಯ ಕಸರತ್ತು ಕೂಡ ನಡೆಸ್ತಿದ್ದ. ಸ್ನೇಹ ಜೀವಿಯಾಗಿದ್ದ ಮನೋಜ್ಗೆ ದೊಡ್ಡ ಸ್ನೇಹ ಬಳಗವಿತ್ತು. ಹೀಗಾಗಿಯೇ ಗೆಳೆಯರ ಏನೇ ಸಮಸ್ಯೆಗೆ ನಾನಿದ್ದೇನೆ ಅಂತಾ ಮುಂದೆ ಇರ್ತಿದ್ದ.
ಯಾವಾಗ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಸಾವನ್ನಪ್ಪಿದ್ನೋ ಆಗ ಆರೋಪಿಗಳನ್ನ ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಯಿತು. ಅನ್ಯ ಧರ್ಮದ ಯುವಕರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ.. ಚಿಕ್ಕಮಗಳೂರಿನಲ್ಲಿ ಬಾಡಿ ಬಿಲ್ಡರ್ ಯುವಕನ ಬರ್ಬರ ಹತ್ಯೆ