ಚಿಕ್ಕಮಗಳೂರು: ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಧಾರಾಕಾರ ಮಳೆಗೆ ನಿನ್ನೆ 40 ವರ್ಷದ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಕಳೆದ ಕೆಲ ದಿನಗಳ ಹಿಂದೆ ,ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕಿ, ಹಳ್ಳದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಳು. ಆಕೆಯ ಮೃತದೇಹ ಹುಡುಕುವ ಶೋಧ ಕಾರ್ಯ ಈ ವರೆಗೂ ಮುಂದುವರೆದಿದ್ದರೂ, ಮೃತದೇಹ ಮಾತ್ರ ಪತ್ತೆಯಾಗಿಲ್ಲ.
ಕಳಸದಲ್ಲಿಯೂ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿ ಮೇಲೆ ಮರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಅದರ ಬೆನ್ನಲ್ಲೇ ಚಿಕ್ಕಮಗಳೂರು ನಗರದ ಹೊರ ವಲಯದ ಉಂಡೆ ದಾಸರ ಹಳ್ಳಿಯಲ್ಲಿ ಉಕ್ಕಿ ಹರಿಯುತ್ತಿರುವ ಹಳ್ಳದಲ್ಲಿ ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಚಿಂದಿ ಆಯಲು ಹೋಗಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋಗಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಗರಸಭೆಯ ಸಿಬ್ಬಂದಿಗಳು, ಸ್ಥಳಕ್ಕೆ ಆಗಮಿಸಿ ನಿನ್ನೆಯಿಂದ ಮೃತ ದೇಹದ ಹುಡುಕಾಟ ನಡೆಸುತ್ತಿದ್ದರೂ ಮೃತದೇಹ ಮಾತ್ರ ಪತ್ತೆಯಾಗಿಲ್ಲ. ಇಂದು ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದು,ಅವರು ಮೃತ ದೇಹದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಹಿಟಾಚಿ ಬಳಸಿ ನಗರಸಭೆಯ ಸಿಬ್ಬಂದಿ ಮೃತದೇಹವನ್ನು ಹುಡುಕುತ್ತಿದ್ದಾರೆ. ಕ್ಷಣದಿಂದ ಕ್ಷಣಕ್ಕೆ ಹಳ್ಳದ ನೀರು ಹೆಚ್ಚುತ್ತಿದ್ದು ಶೋಧಕಾರ್ಯದಲ್ಲಿ ಹಿನ್ನಡೆಯಾಗುತ್ತಿದೆ. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅವರು ಕೂಡ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಓದಿ : ಬೆಂಗಳೂರಿನಲ್ಲಿ ಜುಲೈ 1ರಿಂದ ಇದುವರೆಗೆ ಎರಡು ಟನ್ ನಿಷೇಧಿತ ಪ್ಲಾಸ್ಟಿಕ್ ಜಪ್ತಿ, 8 ಲಕ್ಷ ರೂ. ದಂಡ ವಸೂಲಿ