ಚಿಕ್ಕಮಗಳೂರು: ದೇವಾಲಯದ ಹಣವನ್ನು ಮೋಸದಿಂದ ತಮ್ಮ ವಶಮಾಡಿಕೊಂಡ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವಾಲಯದ ಕಾಣಿಕೆ ಹುಂಡಿಯ 2000 ಹಾಗೂ 500 ರೂಪಾಯಿ ಮೌಲ್ಯದ ನೋಟುಗಳನ್ನು ನೀಡಿದರೆ ಲಕ್ಷಕ್ಕೆ ಶೇ 30 ಹೆಚ್ಚು ಹಣ ನೀಡುವುದಾಗಿ ನಂಬಿಸಿ ಕಡೂರಿಗೆ ಕರೆಸಿ ದೇವಾಲಯದವರಿಗೆ ಮೋಸ ಮಾಡಿದ ಘಟನೆಯೊಂದು ನಡೆದಿದೆ.
ದೇವಾಲಯದ ಕಾಣಿಕೆ ಹುಂಡಿಯ ಹತ್ತು ಲಕ್ಷ ಹಣವನ್ನು ಕೊಟ್ಟು ಶೇ 30 ಹೆಚ್ಚು ಹಣ ಪಡೆಯಲೆಂದು ಬಂದಿದ್ದವರಿಗೆ ಚಳ್ಳೆ ಹಣ್ಣು ತಿನ್ನಿಸಿದ ಆರೋಪಿಗಳು, ಬ್ಯಾಗಿನಲ್ಲಿ 13 ಲಕ್ಷ ಹಣ ಇದೆ, ಇಲ್ಲಿ ಜನ ಓಡಾಡುತ್ತಿದ್ದಾರೆ ವಾಹನದ ಒಳಗೆ ಕುಳಿತು ಸಂಪೂರ್ಣ ಹಣವನ್ನು ಎಣಿಸಿಕೊಳ್ಳಿ ಎಂದು ನಂಬಿಸಿ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇತ್ತ ದೇವಾಲಯದ ಹಣಕೊಟ್ಟು, ಹೆಚ್ಚಿನ ಹಣವನ್ನು ಪಡೆಯುವ ಸಲುವಾಗಿ ಬಂದಿದ್ದವರು ಆರೋಪಿಗಳು ಕೊಟ್ಟ ಬ್ಯಾಗ್ ತೆರೆದು ನೋಡಿದಾಗ ನೋಟಿನ ಕಟ್ಟಿನ ಮೇಲ್ಭಾಗದಲ್ಲಿ ಮಾತ್ರ ನೂರು ರೂಪಾಯಿ ಮುಖ ಬೆಲೆಯ ನೋಟುಗಳಿದ್ದು ಉಳಿದದ್ದೆಲ್ಲವೂ ಬಿಳಿ ಪೇಪರ್ ಎಂದು ನಂತರದಲ್ಲಿ ಕಂಡು ಬಂದಿತ್ತು. ಈ ಕುರಿತಾಗಿ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೋಸ ಮಾಡಿದ ಆರು ಜನ ಆರೋಪಿಗಳ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕಡೂರು ಪಿಎಸ್ಐ ರಮ್ಯ ಎನ್.ಕೆ. ಅವರ ನೇತೃತ್ವದ ತಂಡವು ಈ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ 5.10 ಲಕ್ಷ ಹಣ, ಓಮ್ನಿ ಕಾರು, ಸ್ಕೂಟಿ ಹಾಗೂ ನಾಲ್ಕು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಪರತೆಗೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.