ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನಗತ್ಯವಾಗಿ ತಿರುಗಾಡುವ ಜನರನ್ನು ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರು 'ಮುಕ್ತಿವಾಹನ'ದಲ್ಲಿ ಕುರಿಸುವ ಮೂಲಕ ವಿನೂತನ ಶಿಕ್ಷೆ ನೀಡುತ್ತಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕನ್ನು ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಈಗಾಗಲೇ ಮೇ 24ರ ಬೆಳಗ್ಗೆ 6ರ ವರೆಗೂ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ. ಆದರೂ ಜನರು ಕ್ಯಾರೇ ಎನ್ನದೆ ಅನಗತ್ಯವಾಗಿ ತಿರುಗಾಟ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಗರದಲ್ಲಿ ಪೊಲೀಸ್ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿ, ಜನರನ್ನು ನಿಯಂತ್ರಿಸಲು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಬೇಕಾಬಿಟ್ಟಿ ರಸ್ತೆಗಿಳಿಯುವ ಜನರನ್ನು ಮುಕ್ತಿ ವಾಹನದಲ್ಲಿ ಕೂರಿಸಿ ಶಿಕ್ಷೆ ನೀಡುತ್ತಿದ್ದಾರೆ. ಹೆಚ್ಚು ಓಡಾಟ ಕಂಡು ಬಂದರೇ ಅಂತಹವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿರುವ ಸಿಬ್ಬಂದಿ ಮತ್ತು ಮುಕ್ತಿವಾಹನ ನೋಡಿ ಜನರು ಸ್ಥಳದಿಂದ ಪರಾರಿಯಾಗುತ್ತಿದ್ದಾರೆ. ತರೀಕೆರೆ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.