ಚಿಕ್ಕಮಗಳೂರು : ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ವತಿಯಿಂದ ಕಲ್ಯಾಣನಗರದ ಅಂಬೇಡ್ಕರ್ ವಸತಿ ನಿಲಯದಲ್ಲಿ ಕಳೆದ 65 ದಿನಗಳಿಂದ ನಿರಾಶ್ರಿತರ ಆಶ್ರಯ ಕೇಂದ್ರ ನಡೆಸುತ್ತಿದ್ದು, ಈ ಕೇಂದ್ರದಲ್ಲಿ ಇಂದು ವಿಶೇಷ ಮದುವೆ ನಡೆಯಿತು.
ಕಳೆದ ಎರಡು ತಿಂಗಳಿನಿಂದ ನಿರಾಶ್ರಿತರ ಕೇಂದ್ರದಲ್ಲಿದ್ದ ಕುಮಾರ್ ಮತ್ತು ರೇಣುಕಾ ಕಳೆದ ಮೂರು ವರ್ಷಗಳಿಂದ ವಿವಾಹವಾಗದೆ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಕುಮಾರ್ ಯಾವಾಗಲೂ ರೇಣುಕಾಳಿಗೆ ನಾನೇನು ನಿನಗೆ ತಾಳಿ ಕಟ್ಟಿದ ಗಂಡನೇ ಎಂದು ಜಗಳವಾಡುತ್ತಿದ್ದ. ಇದನ್ನು ನೋಡಿದ ಸಂಘದ ಸದಸ್ಯರು ಇಬ್ಬರೊಂದಿಗೂ ಮಾತುಕತೆ ನಡೆಸಿ, ಈ ದಿನ ನಿರಾಶ್ರಿತರ ಎದುರಿನಲ್ಲಿ ಮದುವೆ ಮಾಡಿಸಿದ್ದಾರೆ.
![ದಾಪಂತ್ಯ ಜೀವನಕ್ಕೆ ಕಾಲಿಟ್ಟ ನಿರಾಶ್ರಿತ ಜೋಡಿ](https://etvbharatimages.akamaized.net/etvbharat/prod-images/kn-ckm-01-marriege-av-7202347_06072021184824_0607f_1625577504_187.jpg)
ಈ ಮದುವೆಗೆ ಆಮಂತ್ರಣ ಪತ್ರವಿಲ್ಲ, ಚಪ್ಪರವಿಲ್ಲ, ಆಡಂಬರವಿಲ್ಲ, ರಕ್ತ ಸಂಬಂಧಿಕರಿಲ್ಲ, ಒಡಹುಟ್ಟಿದವರೂ ಇಲ್ಲ. ಆದರೂ ಮದುವೆ ಬಹಳ ವಿಶಿಷ್ಟವಾಗಿ ನಡೆಯಿತು. ತಾಳಿಗೆ ಅರಿಶಿನ ಕೊಂಬಿನ ಹಳದಿ ದಾರ, ಗಂಡಿಗೆ ಪಂಚೆ, ಪೇಟ,ಬಿಳಿ ಶರ್ಟು. ಹುಡುಗೀಗೆ ಜರಿ ಸೀರೆ,ಬಳೆ, ಅಲಂಕಾರದೊಂದಿಗೆ ವಧು-ವರರು ಹೂವಿನ ಹಾರ ಬದಲಿಸಿ ಹಿಂದೂ ಸಂಪ್ರದಾಯದಂತೆ ಆನ್‌ಲೈನ್ ಮಂತ್ರ ಹಾಗೂ ಗಟ್ಟಿ ಮೇಳದೊಂದಿಗೆ ನಿರಾಶ್ರಿತರ ಮುಂದೆ ಸಪ್ತಪದಿ ತುಳಿದರು.
![ದಾಪಂತ್ಯ ಜೀವನಕ್ಕೆ ಕಾಲಿಟ್ಟ ನಿರಾಶ್ರಿತ ಜೋಡಿ](https://etvbharatimages.akamaized.net/etvbharat/prod-images/kn-ckm-01-marriege-av-7202347_06072021184824_0607f_1625577504_679.jpg)
ಈ ಹಿಂದೆ ಇಬ್ಬರು ಗುಜರಿ ಆರಿಸುವ ಕೆಲಸ ಮಾಡುತ್ತಿದ್ದು, ಬೀದಿ ಬದಿ ಜೀವನ ಸಾಗಿಸುತ್ತಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ನಿರಾಶ್ರಿತರ ಕೇಂದ್ರ ಸೇರಿದ ಇವರು ಪುನಾಃ ರಸ್ತೆಗೆ ಬೀಳಬಾರದೆಂಬ ಉದ್ದೇಶದಿಂದ ಇನ್ನೆರಡು ದಿನಗಳಲ್ಲಿ ಹೋಂ ಸ್ಟೇ ಕೆಲಸಕ್ಕೆ ಈ ದಂಪತಿಯನ್ನು ಈ ಸಂಘವೇ ಕಳುಹಿಸಿ ಕೊಡುತ್ತಿದೆ.
![ದಾಪಂತ್ಯ ಜೀವನಕ್ಕೆ ಕಾಲಿಟ್ಟ ನಿರಾಶ್ರಿತ ಜೋಡಿ](https://etvbharatimages.akamaized.net/etvbharat/prod-images/kn-ckm-01-marriege-av-7202347_06072021184824_0607f_1625577504_797.jpg)