ಚಿಕ್ಕಮಗಳೂರು : ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ಕಾಯಕವೇ ಕೈಲಾಸ ಎಂಬ ತತ್ವದ ಮೇಲೆ ನಂಬಿಕೆ ಇರುವ ಶಿವ ಶರಣ ಹಡಪದ ಅಪ್ಪಣ್ಣ ಅವರ ವಿಚಾರಧಾರೆಗಳನ್ನು ಪ್ರಸ್ತುತ ಸಮಾಜ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವ ಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶಿವ ಶರಣ ಹಡಪದ ಅಪ್ಪಣ್ಣನವರು ಕಾಯಕ ಯೋಗಿ ಹಾಗೂ ಕಾಯಕವೇ ಕೈಲಾಸ ಎಂದ ಮಹಾನ್ ತತ್ವದ ಮೇಲೆ ನಂಬಿಕೆ ಹೊಂದಿದ್ದರು. ಅಲ್ಲದೆ ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸಮಾನತೆಗೆ ಹೆಚ್ಚಿನ ಮಹತ್ವ ನೀಡಿ, ಒಂದು ನೆಲೆಗಟ್ಟು ಸೃಷ್ಟಿಸಿದವರಲ್ಲಿ ಒಬ್ಬರು.
ಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಹಾಗೂ ವಿಚಾರಧಾರೆಗಳನ್ನು ನಾವುಗಳು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಉಂಟಾಗುವ ಅಸಮಾನತೆ, ಸಾಮಾಜಿಕ ವಿಪ್ಲವಗಳು ಹಾಗೂ ಮೇಲು-ಕೀಳು ಎಂಬ ಭಾವನೆಗಳಿಂದ ದೂರವಾಗಬಹುದು ಎಂದರು. ಕಾಯಕ ತತ್ವ ಅಳವಡಿಸಿಕೊಂಡು ತಾವು ಮಾಡುವ ಕೆಲಸವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡಿದ್ದಲ್ಲಿ ಸಮಾಜದಲ್ಲಿ ಗೌರವ ದೊರೆಯಲಿದೆ ಎಂದು ಶರಣ ಹಡಪದ ಅಪ್ಪಣ್ಣನವರು ತಿಳಿಸಿದ್ದಾರೆ ಎಂದರು.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಹಾಗೂ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶರಣ ಹಡಪದ ಅಪ್ಪಣ್ಣ ಅವರು ಕಾರ್ಯ ನಿರ್ವಹಿಸಿದ್ದರು. ಹಾಗೂ ಅನುಭವ ಮಂಟಪದಲ್ಲಿ ಸಮಾನತೆಯನ್ನು ಎತ್ತಿಹಿಡಿದವರಲ್ಲಿ ಒಬ್ಬರಾಗಿದ್ದರು ಎಂದು ಸಚಿವ ಸಿ ಟಿ ರವಿ ಹೇಳಿದರು.