ಚಿಕ್ಕಮಗಳೂರು: ಅದು ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಸೌಂದರ್ಯದ ಖಣಿ. ಹಾವು-ಬಳುಕಿನ ಮೈಕಟ್ಟಿನ ರಸ್ತೆಯ ರೋಮಾಂಚನಕಾರಿ ಪ್ರಯಾಣ. ಅಲ್ಲಿ ಸೌಂದರ್ಯವೂ ಉಂಟು. ಅಪಾಯವೂ ಉಂಟು. ಆ ಸೌಂದರ್ಯ ಆಸ್ವಾದಿಸುತ್ತ ಮೈ ಮರೆಯುತ್ತಿರೋ ಪ್ರವಾಸಿಗರಿಗೆ ಮತ್ತದೇ ಮಗ್ಗಲ ಮುಳ್ಳಾಗಿದ್ದಾರೆ ಖದೀಮರು. ಅಪಘಾತವಾಗಿ ಸಹಾಯ ಕೋರುತ್ತಿದ್ದವರನ್ನು ಸುಲಿಗೆ ಮಾಡ್ತಿದ್ದಾರೆ. ಸಹಾಯದ ನೆಪದಲ್ಲಿ ದರೋಡೆಗೆ ಮುಂದಾಗಿದ್ದಾರೆ.
ಈ ಮಾರ್ಗದಲ್ಲಿ ಮಧ್ಯರಾತ್ರಿ ಬರ್ಲೇಬೇಡಿ. ದರೋಡೆಕೋರರೇನೋ ಸಿಕ್ಕಿದ್ರು. ಆದ್ರೆ, ಪೊಲೀಸರಿಗೆ ನೆರವಾದ ಆ ವ್ಯಕ್ತಿ ಮಾತ್ರ ಸಿಕ್ತಿಲ್ಲ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರನ್ನು ಪ್ರವಾಸಿಗರೇ ದರೋಡೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಮಧ್ಯರಾತ್ರಿ ಅಪಘಾತವಾಗಿತ್ತು. ಕಾರಿನಲ್ಲಿದ್ದವರು ಸಹಾಯ ಬಯಸುತ್ತಿದ್ದರೇ, ಅದೇ ಮಾರ್ಗದಲ್ಲಿ ಬೈಕ್ನಲ್ಲಿ ಬರುತ್ತಿದ್ದವರು ಸಹಾಯ ಮಾಡುವ ನೆಪದಲ್ಲಿ ಅವರನ್ನು ಹೆದರಿಸಿ ಹಣ, ಉಂಗುರ, ಚೈನ್ ಹಾಗೂ ಮೊಬೈಲ್ ದೋಚಿದ್ದಾರೆ.
ಈ ರೀತಿಯ ಪ್ರಕರಣ ಚಾರ್ಮಾಡಿಯ ಸೌಂದರ್ಯದಲ್ಲಿ ಇದೇ ಮೊದಲಲ್ಲ. ಹಾಗಾಗಿ, ಸ್ಥಳೀಯರು ಇದು ಬಹುಪಯೋಗಿ ರಸ್ತೆ. ಶಾಲಾ-ಕಾಲೇಜು, ವ್ಯಾಪಾರ, ಆಸ್ಪತ್ರೆ ಹೀಗೆ ನಾನಾ ಕಾರಣಗಳಿಂದ ಜನ ಅವಲಂಬಿತರಾಗಿದ್ದಾರೆ. ದಿನದ 24 ಗಂಟೆಯೂ ಗಾಡಿಗಳು ಓಡಾಡುತ್ತಿರುತ್ತವೆ. ಹಾಗಾಗಿ, ಮತ್ತೆ ಇಂತಹ ಪ್ರಕರಣ ನಡೆಯದಿರಲು ಚಿಕ್ಕಮಗಳೂರು-ದಕ್ಷಿಣ ಕನ್ನಡ ಪೊಲೀಸರು ಇಲ್ಲಿ ರಾತ್ರಿ ನಿರಂತರವಾಗಿ ಗಸ್ತು ತಿರುಗಬೇಕೆಂದು ಮನವಿ ಮಾಡಿದ್ದಾರೆ.
ಆಗಂತುಕನೋರ್ವ ಮಾಹಿತಿ ನೀಡಿದ ಕಾರಣ ದರೋಡೆಯಾದ ಒಂದೆರಡು ಗಂಟೆಯಲ್ಲೇ ಕಾಫಿನಾಡ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ. ಆದ್ರೀಗ, ಆ ಆಗುಂತಕ ಯಾರು ಎಂಬುದು ತಿಳಿದಿಲ್ಲ. ಕಾಫಿನಾಡ ಪೊಲೀಸರು ಅವನಿಗೊಂದು ರಿವಾರ್ಡ್ ನೀಡಲು ಹುಡುಕುತ್ತಿದ್ದಾರೆ. ಆದರೆ, ಆತ ಯಾರೆಂದು ಸುಳಿವು ಸಿಗ್ತಿಲ್ಲ. ಅವನು ಮಾಹಿತಿ ನೀಡಿದ ಕೂಡಲೇ ಅಲರ್ಟ್ ಆದ ಪೊಲೀಸರು ಅವನ ಮಾಹಿತಿಯನ್ನೂ ಪಡೆದಿಲ್ಲ. ಹಾಗಾಗಿ, ಇದೀಗ ಆ ಆಗುಂತಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಚಾರ್ಮಾಡಿಯಲ್ಲಿ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ. ಅದು ನಿರ್ಜನ ಪ್ರದೇಶ. ಕರೆಂಟ್ ಇಲ್ಲ. ಈ ಪ್ರದೇಶದಲ್ಲಿ ನೆಟ್ವರ್ಕ್ ಕೂಡ ಸಿಗಲ್ಲ. ಮಧ್ಯರಾತ್ರಿ ಸಹಾಯಕ್ಕೆ ಬರುವವರು ಕೂಡ ಕಡಿಮೆ. ಪೊಲೀಸ್ ಹಾಗೂ 112 ನಿರಂತರ ಗಸ್ತು ತಿರುಗುತ್ತಿದ್ದರೂ ಇಂತಹ ಪ್ರಕರಣಗಳು ನಡೆಯುತ್ತವೆ. ಈಗಾಗಲೇ ಮೂರ್ನಾಲ್ಕು ಕೇಸ್ಗಳು ವರದಿಯಾಗಿವೆ. ಹಾಗಾಗಿ, ಇನ್ಮುಂದೆ ಹೀಗೆ ಆಗಬಾರದು. ಬಣಕಲ್‍ನಿಂದ ಚಿಕ್ಕಮಗಳೂರು ಗಡಿಯ ಅಣ್ಣಪ್ಪ ಸ್ವಾಮಿ ದೇಗುಲದವರೆಗೂ ಇನ್ಮುಂದೆ ಮತ್ತಷ್ಟು ಅಲರ್ಟ್ ಆಗಿ ಇರುತ್ತೇವೆ ಎಂದಿದ್ದಾರೆ ಎಸ್ಪಿ ಅಕ್ಷಯ್.
ಒಟ್ಟಾರೆಯಾಗಿ, ಆ ತರಕಾರಿ ಗಾಡಿಯವನು ಮಾಹಿತಿ ನೀಡಿದ್ದರಿಂದ ದರೋಡೆಕೋರರು ಸಿಕ್ಕಿದ್ರು. ಅವನು ಹೇಳದಿದ್ದರೆ ಗೊತ್ತೇ ಆಗ್ತಿರ್ಲಿಲ್ಲ. ಕಂಪ್ಲೆಂಟ್ ಕೊಡ್ತಿದ್ರು, ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಸಿಸಿಟಿವಿ ಕೂಡ ಸ್ಥಗಿತಗೊಂಡಿರುವ ಕಾರಣ ಹುಡುಕೋದು ಕೂಡ ಕಷ್ಟ ಆಗುತ್ತಿತ್ತು. ಆದ್ರೆ, ಆ ಟೆಂಪೋ ಚಾಲಕನಿಂದ ಒಂದೊಳ್ಳೆ ಕೆಲಸವಾಗಿದೆ.
ಇದನ್ನೂ ಓದಿ: 53 ಲಕ್ಷ ಎಗರಿಸಿದ್ದ ಖತರ್ನಾಕ್ ಹ್ಯಾಕರ್ ಬಲೆಗೆ ಬೀಳಿಸಿದ ತೆಲಂಗಾಣ ಪೊಲೀಸ್!