ಚಿಕ್ಕಮಗಳೂರು: ಲಾಕ್ಡೌನ್ನಿಂದ ತೊಂದರೆಗೊಳಗಾದ ನಿರ್ಗತಿಕರು ಹಾಗೂ ವಯೋವೃದ್ದರಿಗಾಗಿ, ನಗರದ ಎಐಟಿ ವೃತ್ತದಲ್ಲಿ 'ಸಹಾಯ ಹಸ್ತ' ಎಂಬ ಯುವಕರ ತಂಡವೊಂದು ನಿರಾಶ್ರಿತರ ಕೇಂದ್ರವನ್ನು ತೆರೆದಿತ್ತು. ಈ ಕೇಂದ್ರದಲ್ಲಿ ಸದ್ಯ 50ಕ್ಕೂ ಹೆಚ್ಚು ನಿರಾಶ್ರಿತರಿದ್ದು, 30 ದಿನಗಳಿಂದಲೂ ದಾನಿಗಳ ನೆರವಿನಿಂದ ಅವರಿಗೆ ಊಟ-ತಿಂಡಿ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಲಾಕ್ಡೌನ್ ಮುಗಿದ ಮೇಲೂ ಅವರು ಬೀದಿಗೆ ಬಂದು ಭಿಕ್ಷೆ ಬೇಡುವುದು ಬೇಡವೆಂದು ಅವರಿಗೆ ಕೆಲಸ ಕೊಡಿಸಲು ಈ ತಂಡ ಮುಂದಾಗಿದ್ದು, ಈಗಾಗಲೇ ಮೂರು ಜನರಿಗೆ ಕೂಡ ಕೊಡಿಸಿದ್ದಾರೆ.
ಈ ನಿರಾಶ್ರಿತ ಕೇಂದ್ರದಲ್ಲಿದ್ದ ಒಟ್ಟು 60 ಜನರಲ್ಲಿ 8 ರಿಂದ 10 ಜನರು ಬುದ್ಧಿ ಮಾಂಧ್ಯರು ಇದ್ದರು. ಈಗ ಅವರು ಮತ್ತೆ ನಾಪತ್ತೆಯಾಗಿದ್ದು, ಕೆಲವರು ಆಸ್ಪತ್ರೆ ಸೇರಿದ್ದಾರೆ. ಈಗ ಇಲ್ಲಿರೋ 50 ಜನರಲ್ಲಿ ಎಲ್ಲರಿಗೂ ಹೊಸ ಬದುಕು ಕಲ್ಪಿಸಲು ಸಹಾಯ ಹಸ್ತ ತಂಡ ಯೋಚನೆ ಮಾಡಿದ್ದು, ಗಾರೆ ಕೆಲಸ, ಎಲೆಕ್ಟ್ರಾನಿಕ್ ಕೆಲಸ, ವಾದ್ಯ ನುಡಿಸುವವರು, ಫ್ಲಂಬರ್ ಹಾಗೂ ಟೇಲರ್ ಸೇರಿದಂತೆ ಬಹುತೇಕ ಕೈ ಕುಸುಬು ಇರುವ ಕೆಲಸಗಾರರು ಇದ್ದಾರೆ.
ದೈಹಿಕವಾಗಿ ಸದೃಢವಾಗಿರುವವರು ಈ ಕೇಂದ್ರದಲ್ಲಿ ಇದ್ದು, ಎಲ್ಲರೂ ಮತ್ತೆ ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಲು ಈ ತಂಡ ಸಹಾಯ ಮಾಡುತ್ತಿದೆ. ಈ ನಿರಾಶ್ರಿತರ ಕೇಂದ್ರದಿಂದ ಹೋದ ಮೇಲೆ ಮತ್ತೆ ಬೀದಿಗೆ ಬಂದು ಭಿಕ್ಷೆ ಬೇಡುವುದು ಕಂಡು ಬಂದರೆ ಜೈಲಿಗೆ ಹಾಕಿಸುತ್ತೇವೆ ಎಂದೂ ಇವರಲ್ಲಿ ಭಯ ಹುಟ್ಟಿಸಿದ್ದಾರೆ. ಇಲ್ಲಿರುವ ಎರಡು ಫ್ಯಾಮಿಲಿಯವರು ಕೋಳಿ ಫಾರಂಗೆ ಹೋಗಲಿದ್ದು, ಇನ್ನು ಕೆಲವರು ಟೇಲರ್ ಗಾರ್ಮೆಂಟ್ಸ್ ಸೇರಲಿದ್ದಾರೆ. ನಾಲ್ವರು ಯುವಕರು ವಾಚ್ಮೆನ್ ಹಾಗೂ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಲಿದ್ದು, ಮೂವರು ತಳ್ಳು ಗಾಡಿಯಲ್ಲಿ ಹೊಸ ಜೀವನ ಆರಂಭಿಸುವ ಭರವಸೆ ನೀಡಿದ್ದಾರೆ.