ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಈಗ ಮತ್ತೆ ಪ್ರಾರಂಭವಾಗಿದ್ದು, ಮಲೆನಾಡು ಜನರು ಮಳೆ ನೋಡಿ ಮತ್ತೆ ಆತಂಕಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಜಾವಳಿ, ಕುದುರೆಮುಖ ಭಾಗದಲ್ಲಿ ಮಳೆ ಪ್ರಾರಂಭವಾಗಿದೆ. ಒಂದು ವಾರ ಕಾಲ ಸುರಿದ ನಿರಂತರ ಮಳೆಯಿಂದಾಗಿ ಮಲೆನಾಡಿನ ಜನರು ಈಗಾಗಲೇ ನಲುಗಿ ಹೋಗಿದ್ದಾರೆ.
ಮಲೆನಾಡು ಭಾಗದಲ್ಲಿ ನೂರಾರು ಮನೆಗಳು ಮತ್ತು ತೋಟಗಳು ಈ ಮಹಾಮಳೆಗೆ ಕೊಚ್ಚಿ ಹೋಗಿವೆ. ಮತ್ತೆ ನಿರಂತರ ಮಳೆ ಸುರಿದರೆ ಮುಂದೇನು ಅಂತಾ ಜನರು ಆತಂಕದಲ್ಲಿದ್ದಾರೆ. ಮತ್ತೆ ಮಹಾಮಳೆ ಬಂದು ಯಾವುದೇ ಅವಾಂತರ ಸೃಷ್ಟಿ ಮಾಡದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.