ಚಿಕ್ಕಮಗಳೂರು: ''ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಏನೂ ಮಾತನಾಡ್ತಿಲ್ಲ. ಮೌನವ್ರತ ತೆಗೆದುಕೊಂಡಿದ್ದಾರೆ'' ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಂಸತ್ತಿನಲ್ಲಿ ಮೋದಿಯವರು ತಮ್ಮ 2 ಗಂಟೆ 13 ನಿಮಿಷದ ಭಾಷಣದಲ್ಲಿ ಕೇವಲ 4 ನಿಮಿಷ ಮಾತ್ರ ಮಣಿಪುರದ ಕುರಿತು ಮಾತನಾಡಿದರು. ಪ್ರಧಾನಿ ಮಾತನಾಡುತ್ತಾ ಮಣಿಪುರದಲ್ಲಿ ಶಾಂತಿ ನೆಲೆಸಲಿದೆ ಎಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು. ಇತಿಹಾಸ ತಿರುಚೋದು, ಕಾಂಗ್ರೆಸ್, ಇಂದಿರಾ ಗಾಂಧಿ, ನೆಹರು, ರಾಜೀವ್ ಅವರನ್ನು ಬೈಯೋದನ್ನು ಬಿಟ್ಟರೆ ಮೋದಿ ಬೇರೇನೂ ಮಾಡುತ್ತಿಲ್ಲ" ಎಂದು ಟೀಕಿಸಿದರು.
ಮಣಿಪುರದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲ್: ''ಇಂಫಾಲ್ ವ್ಯಾಲಿಯಲ್ಲಿ ಕಳೆದ ಚುನಾವಣೆಯಲ್ಲಿ 40ರ ಪೈಕಿ 28 ಸ್ಥಾನಗಳು ಬಿಜೆಪಿಗೆ ಬಂದಿವೆ. 10 ಕುಕಿ ಸೀಟ್‌ಗಳಲ್ಲಿ 10ನ್ನೂ ಬಿಜೆಪಿ ಗೆದ್ದಿದೆ. ಇತ್ತೀಚೆಗೆ ಹಿಂಸಾಚಾರದ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲಾಗಿದ್ದೇ ಕಾರಣ. ಸಿಎಂ ವಿಫಲವಾಗಿದ್ದಾರೆ. ಆದರೆ, ಹೋಂ ಮಿನಿಸ್ಟರ್ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಪ್ರಧಾನಿ ಚೀನಾ ದೇಶಕ್ಕೂ ಕ್ಲೀನ್‌ಚಿಟ್ ಕೊಡ್ತಾರೆ. ನೋಟು ರದ್ದತಿ, ಜಿಎಸ್ಟಿ, ನಿರುದ್ಯೋಗ ಪ್ರಮಾಣ ಹೆಚ್ಚಳ, ಇದ್ಯಾವುದರ ಬಗ್ಗೆಯೂ ಮೋದಿ ಹೇಳುವುದಿಲ್ಲ. ಬರೀ ಕಾಂಗ್ರೆಸ್ ಪಾರ್ಟಿಯನ್ನು ಟಾರ್ಗೆಟ್ ಮಾಡಿ ಮಾತನಾಡ್ತಿದ್ದಾರೆ ಎಂದು ದೂರಿದರು.
ಇತ್ತೀಚಿಗೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಆಗಸ್ಟ್ 10ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ''ಕಾಂಗ್ರೆಸ್ನವರು ಹಲವು ವರ್ಷಗಳಿಂದ ವಿಫಲವಾದ ಉತ್ಪನ್ನವನ್ನೇ ಪುನಃ ಹೊರ ಹಾಕುತ್ತಿದ್ದಾರೆ. ಆದ್ರೆ, ಅದರಿಂದ ಅವರ ಎಲ್ಲ ಕಾರ್ಯಗಳೂ ವಿಫಲವಾಗುತ್ತಿವೆ'' ಎಂದು ವ್ಯಂಗ್ಯವಾಡಿದ್ದರು.
ಮಣಿಪುರ ಹಿಂಸಾಚಾರ ವಿಷಯದ ಕುರಿತು ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸುದೀರ್ಘವಾಗಿ ಉತ್ತರಿಸಿದ್ದ ಅವರು, ಕಾಂಗ್ರೆಸ್ ಮತ್ತು ಮೈತ್ರಿಕೂಟದ ವಿರುದ್ಧ ವಾಕ್ಸಮರ ಮಾಡಿದ್ದರು. ''ಕಾಂಗ್ರೆಸ್ ಪಕ್ಷದ ಸಂಕಷ್ಟ ನನಗೆ ಅರ್ಥವಾಗುತ್ತದೆ. ಹಲವು ವರ್ಷಗಳಿಂದ ಅವರು ವಿಫಲವಾದ ಉತ್ಪನ್ನವನ್ನೇ ಮುನ್ನೆಲೆಗೆ ತರುತ್ತಿದ್ದಾರೆ. ಅದನ್ನು ಉಡಾವಣೆ ಮಾಡಿದರೆ, ಪ್ರತಿ ಬಾರಿಯೂ ವಿಫಲವಾಗುತ್ತಿದೆ. ಇದರಿಂದ ಮತದಾರರ ಮೇಲೆ ಕಾಂಗ್ರೆಸ್ ದ್ವೇಷ ಉತ್ತುಂಗದ ಮಟ್ಟಕ್ಕೇರಿದೆ'' ಎಂದು ಕುಟುಕಿದ್ದರು.
ಇದನ್ನೂ ಓದಿ: PM Modi: 'ಸುಳ್ಳಿನ ಬಜಾರಿನಲ್ಲಿ ಲೂಟಿಯ ಅಂಗಡಿ': ರಾಹುಲ್ 'ಮೊಹಬ್ಬತ್ ಕಿ ದುಕಾನ್'ಗೆ ಮೋದಿ ಟಾಂಗ್- ವಿಡಿಯೋ