ಚಿಕ್ಕಮಗಳೂರು: ವಿದೇಶದಲ್ಲಿ ಹೋಗಿ ದೇಶವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದರೆ, ಅದು ಕೇವಲ ಒಂದು ಕುಟುಂಬದ ಸಂಭ್ರಮಕ್ಕೆ ಮಾತ್ರ ಸೀಮಿತ ಆಗುವುದಿಲ್ಲ. ಊರಿಗೆ ಊರೇ ಸಂಭ್ರಮಿಸುತ್ತದೆ. ಅದೇ ರೀತಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ತವರಿಗೆ ಮರಳಿದ ಅಂಧ ಕ್ರೀಡಾಪಟು ರಕ್ಷಿತಾ ರಾಜುಗೆ ಇಂದು ಭವ್ಯ ಸ್ವಾಗತ ಕೋರಲಾಯಿತು.
ಬಣಕಲ್, ಕೊಟ್ಟಿಗೆಹಾರದ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ಬಣಕಲ್ ಪ್ರೆಂಡ್ಸ್ ಕ್ಲಬ್, ಕೊಟ್ಟಿಗೆಹಾರ ಗೆಳೆಯರ ಬಳಗ, ಆಟೋ ಚಾಲಕ ಮಾಲೀಕರ ಸಂಘ, ಅಂಬೇಡ್ಕರ್ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ರಕ್ಷಿತಾರಾಜುಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೇ ತೆರೆದ ವಾಹನದಲ್ಲಿ ರೋಡ್ ಶೋ ಸಹ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ರಕ್ಷಿತಾರಾಜು ಮಾತನಾಡಿ' ನನ್ನ ಗೆಲುವಿಗೆ ಅಜ್ಜಿಯ ಪ್ರೋತ್ಸಾಹ, ಕೋಚ್ ರಾಹುಲ್, ಗೈಡ್ ರನ್ನರ್ ತಬರೇಶ್, ಸೌಮ್ಯ ಹಾಗೂ ನನಗೆ ಎಲ್ಲ ಸಹಕಾರ ನೀಡಿದ ಸರ್ವರಿಗೂ ನಾನು ಅಭಾರಿಯಾಗಿದ್ದೇನೆ. ಸನ್ಮಾನ ಸ್ವೀಕರಿಸಿ ಮತ್ತಷ್ಟು ಸಾಧನೆ ಮಾಡಲು ನನಗೆ ಪ್ರೇರಣೆಯಾಗಿದೆ" ಎಂದು ಹೇಳಿದರು.
ಕೋಚ್ ರಾಹುಲ್ ಬಾಲಕೃಷ್ಣ ಮಾತನಾಡಿ' ರಕ್ಷಿತಾ ಚಿನ್ನ ಗೆದ್ದಿರುವುದು ಸಂತಸ ತಂದಿದೆ. ಅದರಲ್ಲೂ ಊರಿನವರು ಅವಳ ಸಾಧನೆಗೆ ಸನ್ಮಾನಿಸಿ ಗೌರವಿಸಿರುವುದು ಇನ್ನಷ್ಟು ಪ್ರೇರಣೆಯಾಗಿದೆ" ಎಂದರು.
ರಕ್ಷಿತಾ ರಾಜು ಸಾಧನೆ: ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಮಹಿಳೆಯರ ಟಿ 11 ವಿಭಾಗದ 1500 ಮೀಟರ್ಸ್ ಓಟವನ್ನು 5 ನಿಮಿಷ 21.45 ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು 2017 ಪ್ಯಾರಿಸ್‌ನಲ್ಲಿ ಟಿ 11 ವಿಭಾಗದವರ 1500ಮೀಟರ್ಸ್ ಓಟವನ್ನು 5 ನಿಮಿಷ 26 ಸೆಕೆಂಡುಗಳಲ್ಲಿ ಕ್ರಮಿಸಿ ಮಿಂಚಿದ್ದರು. 2018ರಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ಪ್ಯಾರಾಲಿಂಪಿಕ್ ಕೂಟದ 1500 ಮೀ ಓಟವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರಿಂದ ಮೆಚ್ಚುಗೆ ಪಡೆದರು.
ರಕ್ಷಿತಾ ರಾಜು ಕೌಟುಂಬಿ ಹಿನ್ನೆಲೆ: ಬಾಲ್ಯದಲ್ಲಿ ತಂದೆ ರಾಜು ಮತ್ತು ತಾಯಿ ಗೀತಾರನ್ನು ಕಳೆದುಕೊಂಡ ರಕ್ಷಿತಾ ರಾಜು ಅವರಿಗೆ ಅಂಗವೈಕಲ್ಯ ಕಾಡಿತು. ಅಜ್ಜಿ ಲಲಿತಮ್ಮ ಅವರ ರಕ್ಷಣೆಯಲ್ಲಿ ಬೆಳೆದ ಈಕೆ, ಪ್ರಾಥಮಿಕ ಶಿಕ್ಷಣವನ್ನು ವಾಟೇಕಾನ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಡಿದರು. ಅಂಧತ್ವ ಇದ್ದ ಕಾರಣ ಆ ಶಾಲೆಯಲ್ಲಿ ಕಲಿಯುವುದು ಕಷ್ಟವಾಯಿತು. ಅವರ ಸಮಸ್ಯೆ ಅರಿತ ಶಿಕ್ಷಕರು ಚಿಕ್ಕಮಗಳೂರಿನ ಕೆಂಪನಹಳ್ಳಿಯ ಆಶಾ ಕಿರಣ ಅಂಧರ ಶಾಲೆಗೆ ಸೇರಿಸಿದರು.
ಶಾಲೆಯ ಆಡಳಿತಗಾರ ಜೆ.ಪಿ.ಕೃಷ್ಣೇಗೌಡ ಅವರ ಆಶ್ರಯದಲ್ಲಿ ಅವರ ಶಿಕ್ಷಣ ಮುಂದುವರೆಸಿದರು. ಈಕೆ ಕ್ರೀಡಾಸಕ್ತಿಗೆ ಪೋಷಣೆ ನೀಡಿದ್ದು ದೈಹಿಕ ಶಿಕ್ಷಕ ಪಿ.ಮಂಜು. 2014ರಲ್ಲಿ ಬೆಂಗಳೂರಿನ ಕೋಚ್ ರಾಹುಲ್ ಬಾಲಕೃಷ್ಣ ಹಾಗೂ ರೋಷನ್, ಗೋವಿಂದ್ ಮತ್ತು ಗೈಡ್ ರನ್ನರ್ ಸೌಮ್ಯಾ ತಬರೇಶ್ ಬಳಿ ತರಬೇತಿಗೆ ಸೇರಿದರು. ನಂತರ ದೇಶವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್: ಮೈದಾನಕ್ಕೆ ದಾಖಲೆಯ ವೀಕ್ಷಕರ ಭೇಟಿ