ಚಿಕ್ಕಮಗಳೂರು : ದಟ್ಟ ಕಾಡಿನ ಮಧ್ಯೆ ಇರುವುದು ಒಂದೇ ಮನೆ. ಏನಾದರೂ ಅಗತ್ಯ ವಸ್ತುಗಳು ಬೇಕೆಂದರೆ ಸುಮಾರು 15 ಕಿ.ಮೀ ನಡೆದುಕೊಂಡು ಬರಬೇಕು. ಮನೆಯಲ್ಲಿ ವಿದ್ಯುತ್ ಸೇರಿದಂತೆ ಯಾವುದೇ ಮೂಲ ಸೌಕರ್ಯವಿಲ್ಲ. ಈ ರೀತಿ ಮೂಲ ಸೌಕರ್ಯದಿಂದ ವಂಚಿತರಾಗಿ ಕಳೆದು ನಾಲ್ಕು ದಶಕಗಳಿಂದ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸಮೀಪದ ಅಬ್ಬಿ ಮಠದ ಕ್ಯಾತನಮಕ್ಕಿಯಲ್ಲಿ ಕುಟುಂಬವೊಂದು ಜೀವನ ನಡೆಸುತ್ತಿದೆ.
ಕ್ಯಾತನಮಕ್ಕಿಯ ದಟ್ಟಾರಣ್ಯದ ನಡುವೆ ಲಿಂಗಪ್ಪ ಅವರ ಕುಟುಂಬ ವಾಸವಾಗಿದೆ. ಲಿಂಗಪ್ಪ ಅವರ ಕುಟುಂಬ ಇಲ್ಲಿ ನೆಲೆಸಿದ್ದು, ಮೂಲ ಸೌಕರ್ಯಗಳು ಇವರಿಗೆ ಮರೀಚಿಕೆ. ಇವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಸುಮಾರು ಹದಿನೈದು ಕಿ.ಮೀ ದೂರ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಂತೂ ಕಷ್ಟ ಕೇಳುವುದೇ ಬೇಡ. ರಸ್ತೆ ಮಾರ್ಗ, ವಿದ್ಯುತ್ ಸಂಪರ್ಕ ಇಲ್ಲದೇ ದಿನವೂ ಪರದಾಡಬೇಕಿದೆ.
ದೂರದ ಮಿಲ್ಗೆ ಭತ್ತ ಸಾಗಿಸಲು ಕಷ್ಟವಾಗುವ ಕಾರಣ ಮನೆಯಲ್ಲಿಯೇ ಭತ್ತ ಕುಟ್ಟಿ ಅಕ್ಕಿ ತಯಾರು ಮಾಡುತ್ತಾರೆ. ತರಕಾರಿಯನ್ನು ಇವರೇ ಬೆಳೆಯುತ್ತಾರೆ. ವರ್ಷಕ್ಕಾಗುವಷ್ಟು ಸೌದೆ ತಯಾರು ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೆ ನಡೆದು ಕಳಸಕ್ಕೆ ಬರಬೇಕು.
ಮನೆಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಮನೆಗೆ ಹೋಗಲು ಮೂರು ನಾಲ್ಕು ಹಳ್ಳಗಳನ್ನು ದಾಟಬೇಕು. ಕಾಲು ಸಂಕಗಳು ಮುರಿಯುವ ಹಂತ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಪ್ರದೇಶಕ್ಕೆ ಯಾವುದೇ ವಾಹನಗಳು ಹೋಗುವುದಿಲ್ಲ. ಜೀಪ್ಗಳು ಮಾತ್ರ ನಿಯಮಿತವಾಗಿ ಸಂಚಾರ ನಡೆಸುತ್ತವೆ. ಮಳೆಗಾಲದಲ್ಲಿ ವಾಹನ ಸಂಚಾರ ಬಂದ್ ಆಗುತ್ತದೆ.
ಆದರೂ ಈ ಕುಟುಂಬ ಕಾಡಿನ ಮಧ್ಯೆ ಅಚ್ಚುಕಟ್ಟಾಗಿ ಜೀವನ ಸಾಗಿಸುತ್ತಿದೆ. ಇವರಿಗೆ ಇಬ್ಬರು ಮಕ್ಕಳು. ಒಬ್ಬರನ್ನು ದೂರದ ಕಾಲೇಜಿಗೆ ತೆರಳಲು ಕಷ್ಟವಾಗುವ ಕಾರಣಕ್ಕೆ ಕಾಲೇಜು ಬಿಡಿಸಿದ್ದಾರೆ. ಕಾಡಿನ ಪರಿಸರವಾದ್ದರಿಂದ ಯಾವಾಗ, ಯಾವ ಕಾಡುಪ್ರಾಣಿಗಳು ತೊಂದರೆ ನೀಡುತ್ತವೆ ಎಂದು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕು.
ಮನೆಯೊಡತಿ ನಾಗರತ್ನ ಮಾತನಾಡಿ, "ಇಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ನಾವು ಏನಾದರೂ ವಸ್ತುಗಳು ಬೇಕಾದರೆ ಅಥವಾ ಆರೋಗ್ಯ ತುರ್ತು ಸಂದರ್ಭ ಉಂಟಾದರೆ ಸುಮಾರು 15 ಕಿಮೀ ನಡೆದುಕೊಂಡೇ ಹೋಗಬೇಕು. ರಸ್ತೆ, ವಿದ್ಯುತ್ ಸಂಪರ್ಕ ಯಾವುದೂ ಇಲ್ಲ. ಕಳೆದ 35 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಭತ್ತ ಬೆಳೆಯುತ್ತೇವೆ. ಅದನ್ನು ಮಿಲ್ಗೆ ಸಾಗಿಸಲು ದೂರವಾಗುತ್ತದೆ. ಹಾಗಾಗಿ ನಾವು ಇಲ್ಲೇ ಕುಟ್ಟಿ ಪುಡಿ ಮಾಡಿ ಅಕ್ಕಿ ಮಾಡುತ್ತೇವೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದೇವೆ. ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯ ದೊರೆತಿಲ್ಲ" ಎಂದರು.
ಮಗಳು ವೀಣಾ ಮಾತನಾಡಿ, "ಮನೆ ನಿರ್ಮಾಣ ಮಾಡಲು ಅರ್ಜಿ ಹಾಕಿದ್ದೆವು, ಅದೂ ಬಂದಿಲ್ಲ. ಇಲ್ಲಿ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲ. ರಸ್ತೆ ಸೌಲಭ್ಯ, ವಿದ್ಯುತ್ ಸೌಲಭ್ಯ ಯಾವುದೂ ಇಲ್ಲ. ದೂರ ಎಂಬ ಕಾರಣಕ್ಕೆ ಕಾಲೇಜು ಬಿಟ್ಟಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ : ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ: 30 ಮನೆಗಳಿಗೆ ಹಾನಿ, ಗೋಡೆ ಕುಸಿದು 5 ಕುರಿಮರಿ ಸಾವು