ಚಿಕ್ಕಮಗಳೂರು: ಪ್ರವಾಸಿ ಜಿಲ್ಲೆ ಕಾಫಿನಾಡಲ್ಲಿ ನಿಫಾ ವೈರಸ್ ಆತಂಕ ಹೆಚ್ಚಾಗಿದೆ. ಹೀಗಾಗಿ, ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಕಾಫಿನಾಡಿಗೆ ನಿತ್ಯ ಸಾವಿರಾರು ಜನ ಕೇರಳಿಗರು ಬರ್ತಿರೋದ್ರಿಂದ ಇಲ್ಲಿನ ಜನ ಆತಂಕದಲ್ಲೇ ಬದುಕುವಂತಾಗಿದೆ. ಬಂದಂತಹ ಪ್ರವಾಸಿಗರು ಹೋಟೆಲ್, ಲಾಡ್ಜ್, ರೆಸಾರ್ಟ್‍ಗಳಲ್ಲಿ ತಂಗುತ್ತಿದ್ದು, ಎಲ್ಲಿ ನಿಫಾ ಹರಡುತ್ತೋ ಅನ್ನೋ ಭಯ ಕಾಫಿನಾಡಿಗರಲ್ಲಿ ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನಿಗಾ ವಹಿಸಿದ್ದು, ನಿಫಾಗಾಗಿಯೇ ಸ್ಪೆಷಲ್ ವಾರ್ಡ್ ನಿರ್ಮಿಸಿದ್ದಾರೆ. ಕಾಫಿನಾಡಲ್ಲಿ ಒಂದೆಡೆ ಬಾವುಲಿಗಳ ಭಯ, ಮತ್ತೊಂದೆಡೆ ಕೇರಳದ ಪ್ರವಾಸಿಗರ ಆತಂಕ ಮನೆಮಾಡಿದೆ.
ಹೌದು.. ಕಾಫಿನಾಡ ಜನರಿಗೆ ಈಗ ನಿಫಾ ವೈರಸ್ ಆತಂಕ ಶುರುವಾಗಿದೆ. ಗಿರಿ ಭಾಗದಲ್ಲಿನ ಸಾಧಾರಣ ಮಳೆಗೆ ಗಿರಿಯ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಹಾಗಾಗಿ, ಇಲ್ಲಿನ ಸೌಂದರ್ಯ ಸವಿಯೋಕೆ ರಾಜ್ಯ ಸೇರಿದಂತೆ ಹೊರರಾಜ್ಯದಿಂದ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅದರಲ್ಲಿ ಕೇರಳಿಗರೇ ಹೆಚ್ಚು. ಹಾಗಾಗಿಯೇ, ಕಾಫಿನಾಡಿಗೆ ಭಯವೂ ಹೆಚ್ಚಾಗಿದೆ. ಏಜೆನ್ಸಿಗಳ ಪ್ಯಾಕೇಜ್ ಮೂಲಕ ನಿತ್ಯ ಕಾಫಿನಾಡಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡ್ತಿರೋದು ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ನಿಫಾ ಛಾಯೆ ಆವರಿಸಿದೆ.
ಇದು ಒಂದೆಡೆಯಾದ್ರೆ, ನಿಫಾ ಹರಡುವಿಕೆಯಲ್ಲಿ ಬಾವುಲಿಗಳದ್ದೇ ಲೀಡ್ ರೋಲ್ ಪಾತ್ರವಾಗಿರೋದ್ರಿಂದ ನಗರದ ಕೇಂದ್ರ ಬಿಂದುವಾಗಿರೋ ಜಿಲ್ಲಾಧಿಕಾರಿ ಕಚೇರಿ, ಎಸ್ಪಿ ಆಫೀಸ್, ಎಸ್ಪಿ-ಡಿಸಿ ಮನೆ, ನಗರಸಭೆ, ಕೋರ್ಟ್, ಆಸ್ಪತ್ರೆ, ಶಾಲೆ ಆವರಣದಲ್ಲಿನ ಹತ್ತಾರು ವರ್ಷಗಳ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಬಾವುಲಿಗಳು ಜೋತು ಬಿದ್ದಿರೋದು ನಗರ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ, ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಿರೋ ಸರ್ಕಾರ, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ ನಿರ್ಮಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ನಿಫಾ ವಾರ್ಡ್ ಎಂದು ಒಂದು ಸ್ಪೆಷಲ್ ವಾರ್ಡ್ ನಿರ್ಮಾಣ ಮಾಡಲಾಗಿದೆ. ಆರು ಬೆಡ್‍ಗಳ ವಾರ್ಡ್‍ನಲ್ಲಿ ಆರೂ ಬೆಡ್‍ಗೂ ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವುಳ್ಳ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ನಿಫಾ ಪ್ರಕರಣ ಕೂಡ ದಾಖಲಾಗಿಲ್ಲ. ಆದ್ರೆ, ಆತಂಕವಂತೂ ಇದ್ದೇ ಇದೆ. ಸಾಲದ್ದಕ್ಕೆ ನಗರಸಭೆ ಆವರಣದಲ್ಲಿ ಬೃಹತ್ತಾದ ಪಾರ್ಕ್ ಕೂಡ ಇದೆ. ದಿನಂಪ್ರತಿ ಸಾವಿರಾರು ಜನ ಓಡಾಡ್ತಾರೆ. ಮಕ್ಕಳು ಆಟವಾಡ್ತಾರೆ. ಹಿರಿಯರು ವಿಶ್ರಾಂತಿ ಪಡೆಯುತ್ತಾರೆ. ಪಾರ್ಕ್ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆಯೂ ಇದೆ. ಹಾಗಾಗಿ, ಸ್ಥಳೀಯರು ಕೂಡ ಸರ್ಕಾರ ಬಾವುಲಿಗಳನ್ನ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದು, ಸದ್ಯಕ್ಕೆ ಕೇರಳ ಪ್ರವಾಸಿಗರನ್ನ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಸರ್ಜನ್ ಡಾ. ಮೋಹನ್ ಅವರು ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಆರು ಬೆಡ್ನ ವಾರ್ಡ್ ಅನ್ನು ಮೀಸಲಿಟ್ಟಿದ್ದೇವೆ. ಕೇರಳದಿಂದ ಜನರು ಬಂದರೂನೂ ಜನರಿಂದ ಜನರಿಗೆ ಸಂಪರ್ಕದಿಂದ ಹೆಚ್ಚು ತೊಂದರೆಯಾಗದಿರುವುದರಿಂದ ಪ್ರತ್ಯೇಕ ವಾರ್ಡ್ ನಿರ್ಮಿಸಿದ್ದೇವೆ. ಒಂದು ವೇಳೆ ಎಮರ್ಜೆನ್ಸಿ ಕೇಸ್ ಬಂದರೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಇದ್ದಾರೆ. ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದಿದ್ದಾರೆ.
ಒಟ್ಟಾರೆಯಾಗಿ, ಸದ್ಯಕ್ಕಂತು ಕಾಫಿನಾಡಲ್ಲಿ ಈ ವೈರಸ್ ಪತ್ತೆಯಾಗಿಲ್ಲ. ಆದ್ರೆ, ಭಯವನ್ನಂತೂ ತರಿಸಿದೆ. ಮರಗಳಲ್ಲಿ ಜೋತುಬಿದ್ದಿರೋ ಬಾವುಲಿಗಳನ್ನ ಕಂಡು ವೈರಸ್ ನಮಗೂ ಬಂದ್ರೆ ಎಂದು ಜನ ಆತಂಕದಲ್ಲೇ ಬದುಕ್ತಿದ್ದಾರೆ. ಅವರಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಇಲ್ಲಿಗೆ ಕೆಲಸ-ಕಾರ್ಯಗಳಿಗೆ ಬರೋ ಜನರೂ ಇದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ನಗರದ ಕೇಂದ್ರಸ್ಥಳದ ಮರಗಳಲ್ಲಿ ಜೋತು ಬಿದ್ದಿರೋ ಬಾವುಲಿಗಳ ಸ್ಥಳಾಂತರದ ಜೊತೆ, ತಾತ್ಕಾಲಿಕವಾಗಿ ಕೇರಳ ಪ್ರವಾಸಿಗರನ್ನ ನಿಷೇಧಿಸೋದು ಒಳ್ಳೆಯದು ಎಂಬುದು ಸಾರ್ವಜನಿಕರ ಒತ್ತಾಯ.
ಇದನ್ನೂ ಓದಿ: ಚಿಕ್ಕಮಗಳೂರು ಜನತೆಗೆ ನಿಫಾ ವೈರಸ್ ಭೀತಿ.. ಬಾವಲಿಗಳ ಸ್ಥಳಾಂತರಕ್ಕೆ ಒತ್ತಾಯ