ಚಿಕ್ಕಮಗಳೂರು: "ಎಂ.ಪಿ.ಕುಮಾರಸ್ವಾಮಿ ಅವರು ನಿನ್ನೆಯಷ್ಟೇ ಪಕ್ಷಕ್ಕೆ ಬಂದಿದ್ದಾರೆ. ಮೊದಲು ಪಕ್ಷದ ಸಿದ್ಧಾಂತವನ್ನು ತಿಳಿದುಕೊಳ್ಳಲಿ. ಪಕ್ಷಕ್ಕೆ ಬಂದ ಕೂಡಲೇ ಮಣೆ ಹಾಕುವುದು ಸೂಕ್ತವಲ್ಲ. ಈ ಬಾರಿ ಚುನಾವಣೆಗೆ ಬಿ ಫಾರಂ ನನಗೆ ಕೊಡಬೇಕು" ಎಂದು ಮೂಡಿಗೆರೆಯ ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಬಿ.ನಿಂಗಯ್ಯ ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ನಿಂಗಯ್ಯ ಸುದ್ದಿಗಾರೊಂದಿಗೆ ಮಾತನಾಡಿದರು. "ನಾನು ಜೆಡಿಎಸ್ ಪಕ್ಷದಲ್ಲಿ ಕಳೆದ 38 ವರ್ಷಗಳಿಂದ ದುಡಿಯುತ್ತಿದ್ದೇನೆ. ಇದನ್ನು ಗುರುತಿಸಿ ಪಕ್ಷ ನನ್ನನ್ನು ಅಭ್ಯರ್ಥಿಯೆಂದು ಘೋಷಿಸಿತ್ತು. ಆ ಹಿನ್ನಲೆಯಲ್ಲಿ ಪ್ರಚಾರ ಮಾಡಿಕೊಂಡು ಬಂದಿದ್ದೇನೆ, ಈಗಲೂ ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸವಿದೆ."
"ಮೂಡಿಗೆರೆಯಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ರೇವಣ್ಣ ಅವರು ಇವರೇ ನಮ್ಮ ಅಭ್ಯರ್ಥಿ, ಎಲ್ಲರೂ ಸಹಕರಿಸಿ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ನನಗೆ ಬಿ ಫಾರ್ಮ್ ಕೊಡುತ್ತಾರೆಂದು ವಿಶ್ವಾಸವಿದೆ. ಪಕ್ಷಕ್ಕೆ ಎಂ.ಪಿ.ಕುಮಾರಸ್ವಾಮಿ ಬಂದಿದ್ದಾರೆ, ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ, ಮೊದಲು ಆವರಿಗೆ ಪಕ್ಷದಲ್ಲಿ ದುಡಿಯಲು ಅವಕಾಶ ಕೊಡಬೇಕು. ಕ್ಷೇತ್ರದಲ್ಲಿ ಜನರ ಅಭಿಪ್ರಾಯ ನನ್ನ ಪರವಿದೆ. ಈ ಚುನಾವಣೆಯಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೆ ಬಿ ಫಾರ್ಮ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇನೆ, ಇಲ್ಲಿ ವ್ಯತ್ಯಾಸವಾದರೆ ಪಕ್ಷಕ್ಕೂ ಕೂಡ ದೊಡ್ಡ ನೋವುಂಟಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮದ್ದೂರಿನಲ್ಲಿ ಮುಂದುವರೆದ ಭಿನ್ನಮತ: ಡಿಕೆಶಿ ವಿರುದ್ದ ಕಾರ್ಯಕರ್ತರ ಆಕ್ರೋಶ