ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಸ್ಥಳದಲ್ಲಿಯೇ ತಾಯಿ ಮಗ ಗುಡ್ಡದ ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿದ್ದರು. ಎರಡು ದಿನಗಳ ನಿರಂತರ ಕಾರ್ಯಚರಣೆಯ ಬಳಿಕ ಅವರ ಮೃತ ದೇಹವೂ ಸಿಕ್ಕಿತ್ತು.
ನಂತರ ಮೂಡಿಗೆರೆ ತಾಲೂಕು ಆಸ್ವತ್ರೆಯಲ್ಲಿ ತಾಯಿ ಶೇಷಮ್ಮ ಹಾಗೂ ಮಗ ಸತೀಶ್ ಅವರ ಮೃತ ದೇಹದ ಪೋಸ್ಟ್ ಮಾರ್ಟಂ ಕೂಡ ಮಾಡಿಸಿ ಊರಿಗೆ ತೆಗೆದುಕೊಂಡು ಹೋಗಲಾರದೇ ಶವಗಳನ್ನು ಆಸ್ವತ್ರೆಯಲ್ಲಿ ಅವರ ಸಂಬಂಧಿಕರು ಇಟ್ಟುಕೊಂಡಿದ್ದರು. ಅಂತೂ ಇಂತೂ ಊರಿಗೆ ಮೃತ ದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು.
ಈ ಘಟನೆಯಿಂದ ಅವರ ಇಡೀ ಕುಟುಂಬ ನೋವಿನಲ್ಲಿತ್ತು. ಹೀಗೆ ಸಂಕಷ್ಟದಲ್ಲಿದ್ದ ಮೃತರ ಮನೆಗೆ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಕುಟುಂಬದವರಿಗೆ ಧೈರ್ಯ ತುಂಬಿದರು. ಶೇಷಮ್ಮ ಹಾಗೂ ಸತೀಶ್ ಮೃತ ಪಟ್ಟ ಹಿನ್ನೆಲೆಯಲ್ಲಿ ತಲಾ 4 ಲಕ್ಷದಂತೆ 8 ಲಕ್ಷ ರೂ. ಚೆಕ್ ಅನ್ನು ಸತೀಶ್ ಹೆಂಡತಿ ಶೈಲಾ ಅವರಿಗೆ ಹಸ್ತಾಂತರ ಮಾಡಿದರು. ಇದು ತಾತ್ಕಾಲಿಕ ಪರಿಹಾರವಾಗಿದ್ದು ಇನ್ನು ಸರ್ಕಾರದಿಂದ ಹಣದ ನೆರವು ಕೊಡಿಸುವುದಾಗಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.
ಸತೀಶ್ ಅವರಿಗೆ ಇಬ್ಬರು ಪುಟ್ಟ ಪುಟ್ಟ ಹೆಣ್ಣು ಮಕ್ಕಳಿದ್ದು, ಅವರನ್ನು ಚೆನ್ನಾಗಿ ಸಾಕುವಂತೆ ಶಾಸಕರು ಶೈಲಾ ಅವರಿಗೆ ಸಲಹೆ ನೀಡಿದರು.