ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಡಳಿತದಲ್ಲಿ ಸುಧಾರಣೆ ತಂದು ಅನುಷ್ಠಾನಕ್ಕೆ ತರಲು ಪ್ರತಿ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಇಂದು ಜಿಲ್ಲೆಗೆ ಆಗಮಿಸಿದ್ದ ಸಚಿವರು ಖಾಸಗಿ ಹೋಟೆಲ್ ವೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಜನ ಪ್ರತಿನಿಧಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದೊಂದಿಗೆ ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದರು.
ನಗರದ ಕುಡಿಯುವ ನೀರಿನ ಸಮಸ್ಯೆ ಯುಜಿಡಿ ಕಾಮಗಾರಿಯ ವಿಳಂಬ ಹಾಗೂ ನಿವೇಶನ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಿಂದೆ ನಡೆದಿರುವ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲಿಸಿ ಸಭೆ ನಡೆಸಿ, ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಬಳಿಕ ಹಿಂಪಡೆದಿದ್ದಕ್ಕೆ ಬಿಜೆಪಿಯ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರ ಕೆಲಸವೇ ವಿರೋಧ ಮಾಡೋದು. ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಅವರ ಕೆಲಸ. ಅವರು ಪ್ರತಿ ಪಕ್ಷ ಅಲ್ಲ, ವಿರೋಧ ಪಕ್ಷ ಎಂದು ಲೇವಡಿ ಮಾಡಿದರು. ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು.
ಬಲವಂತ ಹಾಗೂ ಆಶ್ವಾಸನೆ ಕೊಟ್ಟು ಮತಾಂತರ ಮಾಡೋದು ತಪ್ಪು. ಅದು ಹಳೇ ಕಾಯ್ದೆ ಇದೆ. ಅದನ್ನ ನಾವು ಒಪ್ಪುತ್ತೇವೆ. ಆದರೆ, ಅವರು ಇದರಲ್ಲಿ ಕೆಲವು ತಪ್ಪು ಮಾಡಿದ್ದಾರೆ. ಅದನ್ನ ನಾವು ಸರಿ ಮಾಡುತ್ತೇವೆ. ನಮಗೆ ಜವಾಬ್ದಾರಿ ಇದೆ. ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಹೇಳಿದರು.
ವಿದ್ಯುತ್ ದರ ಹೆಚ್ಚಳದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ನೂತನ ಸರ್ಕಾರ ವಿದ್ಯುತ್ ಬೆಲೆ ಹೆಚ್ಳ ಮಾಡಿಲ್ಲ ಕೆ.ಇ.ಆರ್.ಸಿ ಶಿಫಾರಸ್ಸಿನಂತೆ ವಿದ್ಯುತ್ ದರ ಹೆಚ್ಚಳವಾಗಿದ್ದು, ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿರ್ಧಾರವಾಗಿತ್ತು. ಚುನಾವಣೆ ನೀತಿ ಸಂಹಿತೆಯಿಂದ ಅನುಷ್ಠಾನಕ್ಕೆ ಬಂದಿರಲಿಲ್ಲ ಈಗ ಕೆ.ಇ.ಆರ್.ಸಿ ನಿರ್ಧಾರದಂತೆ ಅನಿವಾರ್ಯವಾಗಿ ವಿದ್ಯುತ್ ದರ ಹೆಚ್ಚಳವಾಗಿದೆ. ಆದರೂ ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರ ಕೆ.ಇ.ಆರ್.ಸಿಗೆ ಮನವರಿಕೆ ಮಾಡಲಿದೆ ಎಂದು ತಿಳಿಸಿದರು.
ಉಚಿತ ಅಕ್ಕಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರಕ್ಕೆ ನಾವು ಅಕ್ಕಿಯನ್ನು ಉಚಿತವಾಗಿ ಕೇಳುತ್ತಿಲ್ಲ. ದುಡ್ಡು ಕೊಡ್ತೀವಿ ಕೊಡಿ ಎಂದು ಕೇಳಿದ್ದೇವೆ. ಸಿಟಿ ರವಿ ಹೇಳುತ್ತಾರೆ ಜನರಿಗೆ ಅಕ್ಕಿ ಬದಲು ದುಡ್ಡು ಕೊಟ್ಟರೆ ಅಕ್ಕಿ ಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಜನರಿಗೆ ಬೇಕಾಗಿರುವುದು ಅಕ್ಕಿ. ದುಡ್ಡಲ್ಲ. ಎಫ್.ಸಿ.ಐ. ಅವರೇ ಸ್ಟಾಕ್ ಇದೆ ಕೊಡುತ್ತೇವೆ ಎಂದು ಪತ್ರ ಕೊಟ್ಟಿದ್ದಾರೆ. ಈಗ ಅಕ್ಕಿ ವಾಪಸ್ ಹೋಗಿದೆ ಎಂದು ಹೇಳಿದ್ದಾರೆ. ಅಕ್ಕಿ ಇರುವುದೇ ಬಡವರಿಗೆ ಕೊಡುವುದಕ್ಕೆ. ದುಡ್ಡು ಕೊಡಿ ಅಂದ್ರೆ ಹೇಗೆ. ಜನರಿಗೆ ಬೇಕಾಗಿರುವುದು ಅಕ್ಕಿ. ದುಡ್ಡಲ್ಲ ಎಂದು ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಅಂಬೇಡ್ಕರ್ ಅಷ್ಟೇ ಅಲ್ಲ, ಯಾವುದೇ ಕ್ರಾಂತಿಕಾರಿಗಳನ್ನು ಕಂಡರೂ ಆಗಲ್ಲ: ಸಿ.ಟಿ ರವಿ ವಾಗ್ದಾಳಿ