ಚಿಕ್ಕಮಗಳೂರು : ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ, ನನ್ನ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂಬ ಮಾತನ್ನು ಸಚಿವ ಸಿ ಟಿ ರವಿ ಈ ಹಿಂದೆಯೇ ಹೇಳಿದ್ದರು. ಬಿಜೆಪಿ ಪಕ್ಷದಲ್ಲಿ ಒಬ್ಬರಿಗೆ ಒಂದೇ ಸ್ಥಾನ ಎಂಬ ಅಲಿಖಿತ ನಿಯಮವಿದೆ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದರು.
ಈ ಹಿನ್ನೆಲೆ ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗ್ತಿದೆ. ರಾಜೀನಾಮೆ ಸಲ್ಲಿಸಿದ ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಸಿ ಟಿ ರವಿ ದೆಹಲಿಗೆ ತೆರಳಿದ್ದಾರೆ.
ಆದರೆ, ಸಿ ಟಿ ರವಿಯವರು ಸಲ್ಲಿಸಿರುವ ರಾಜೀನಾಮೆಯನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಈವರೆಗೆ ಅಂಗೀಕರಿಸಿಲ್ಲ ಎನ್ನಲಾಗ್ತಿದೆ. ಸಿ ಟಿ ರವಿ ದೆಹಲಿಯಿಂದ ಹಿಂದುರುಗಿದ ಬಳಿಕ ಯಾವ ಬೆಳವಣಿಗೆಗಳು ನಡೆಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.