ಚಿಕ್ಕಮಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ನಿನ್ನೆಯಿಂದ ಮೇ 3 ವರೆಗೆ ಎರಡನೇ ಹಂತದ ಲಾಕ್ ಡೌನ್ ವಿಸ್ತರಿಸಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರು ಲಾಕ್ಡೌನ್ನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.
ಪ್ರಮುಖವಾಗಿ ರೈತರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ತೊಂದರೆ ಆಗದ ರೀತಿ ಅವರಿಗೆ ಲಾಕ್ ಡೌನ್ ಸಡಿಲಿಸಬೇಕು. ತರಕಾರಿ ಬೆಳೆದ ರೈತರಿಗೆ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಕಾಫಿ, ಮೆಣಸು, ಅಡಿಕೆ ಬೆಳೆಗಾರರಿಗೆ ಸಮಸ್ಯೆಗಳಾಗಿವೆ. ಅವರೆಲ್ಲಾ ತಮ್ಮ ಮನೆಯಿಂದ ತೋಟಕ್ಕೆ ಹೋಗಲು ಪಾಸ್ ಸಿಗದೆ ಕಷ್ಟ ಪಡುತ್ತಿದ್ದಾರೆ. ಸರ್ಕಾರ ಉಚಿತವಾಗಿ ಆಹಾರ ವಿತರಣೆಗೆ ಮುಂದಾಗಿದ್ದರೂ ಶೇ.50 ಮಂದಿ ಬಡವರಿಗೆ ಆಹಾರ ಸಾಮಗ್ರಿ ದೊರೆತಿಲ್ಲ. ಈ ಸಂಧರ್ಭದಲ್ಲಿ ಅಡುಗೆ ಮಾಡಲು ಗ್ಯಾಸ್ ಸಿಲಿಂಡರನ್ನು ಕೂಡಾ ದುಡ್ಡು ಕೊಟ್ಟು ಕೊಂಡು ಕೊಳ್ಳುವಂತಾಗಿದೆ. ಎಲ್ಲಾ ಬಿಪಿಎಲ್ ಕಾರ್ಡ್‍ದಾರರಿಗೆ ಹಾಲು ನೀಡುವ ವ್ಯವಸ್ಥೆಯಾಗಬೇಕು. ಸಾರ್ವಜನಿಕರಿಗೆ ಅನಾರೋಗ್ಯದ ತುರ್ತು ಕಾಡಿದರೆ ಇಲ್ಲಿಂದ ಶಿವಮೊಗ್ಗ, ಮಂಗಳೂರು ಹಾಗೂ ಮಣಿಪಾಲಕ್ಕೆ ಹೋಗುವವರ ಸಂಖ್ಯೆ ಬಹಳಷ್ಟಿದೆ. ಅಂತರ್ ಜಿಲ್ಲಾ ಓಡಾಟಕ್ಕೆ ಒಂದು ಅನುಕೂಲ ಆಗಬೇಕು ಎಂದು ಹೇಳಿದರು.
ವ್ಯವಸಾಯ ಮಾಡುವವರಿಗೆ ನಿಬಂಧನೆಗಳೊಂದಿಗೆ ಅವರ ಕೆಲಸ ಮಾಡಲು ಅವಕಾಶ ನೀಡಬೇಕು. ಈಗಾಗಲೇ ಹೋಂ ಕ್ವಾರಂಟೈನ್ ಮುಗಿಸಿರುವವರಿಗೆ ಏನಾದರೂ ಸಹಾಯ ಮಾಡಬೇಕಿದೆ. ಜಿಲ್ಲಾಡಳಿತ ಇವರೆಲ್ಲರ ಬಗ್ಗೆ ಯೋಚಿಸಬೇಕು. ಕೂಲಿ ಮಾಡಿ ಜೀವಿಸುವವರಿಗೆ ಎರಡು ತಿಂಗಳ ದಿನಸಿ ಸಿಗುವಂತೆ ಅವಕಾಶವಿರಬೇಕು. ಜಿಲ್ಲಾಡಳಿತ ಸಾಕಷ್ಟು ಪ್ರಮಾಣದಲ್ಲಿ ವೆಂಟಿಲೇಟರ್ಗಳನ್ನು ಇಟ್ಟುಕೊಳ್ಳಬೇಕು ಎಂದು ಸಾಕಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಸಿ.ಟಿ. ರವಿ ತಮ್ಮ ಸಲಹೆ ನೀಡಿದರು.