ಚಿಕ್ಕಮಗಳೂರು : ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಕುರಿತು ಚರ್ಚೆ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾಫಿನಾಡಿನಲ್ಲೂ ಮಹಿಷ ದಸರಾ ಸಂಬಂಧ ಪರ ವಿರೋಧ ಚರ್ಚೆಗಳು ವ್ಯಾಪಕವಾಗಿವೆ. ಈ ಹಿನ್ನೆಲೆಯಲ್ಲಿ ಹಾಗೂ ಮಹಿಷ ದಸರಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಂಜಾಗ್ರತ ಕ್ರಮವಾಗಿ (ಇಂದಿನಿಂದ) ಅಕ್ಟೋಬರ್ 19 ರಿಂದ ಅಕ್ಟೋಬರ್ 24 ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಮಹಿಷ ದಸರಾ ಆಚರಣೆ ಸಂಬಂಧ ಜಿಲ್ಲಾದ್ಯಂತ ಯಾವುದೇ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಆಳವಡಿಸುವುದು, ಪ್ರತಿಭಟನೆ ಮತ್ತು ಮೆರವಣಿಗೆ ನಡೆಸುವುದು, ಅವಹೇಳನಕಾರಿ ಘೋಷಣೆಗಳು, ಭಾಷಣಗಳು, ಪ್ರಕಟಣೆಗಳು, ಅವಾಚ್ಯ ಶಬ್ಧಗಳ ಬಳಕೆ, ಪ್ರಚೋದನಕಾರಿ ಭಾಷಣ, ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ.
![DC Meena Nagaraj](https://etvbharatimages.akamaized.net/etvbharat/prod-images/19-10-2023/kn-ckm-03-nishedagne-av-7202347_18102023224740_1810f_1697649460_986.jpg)
ಮೈಸೂರು ಜಿಲ್ಲೆಯ ಬಳಿಕ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಹಿಷ ದಸರಾ ಆಚರಣೆಗೆ ದಲಿತ ಸಂಘಟನೆಗಳು ಸಿದ್ಧತೆ ನಡೆಸಿದ್ದವು. ಇದೇ ತಿಂಗಳು 20 ರಂದು ಹಮ್ಮಿಕೊಂಡಿರುವ ಮಹಿಷ ದಸರಾಕ್ಕೆ ಕಾಫಿನಾಡಿನಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಹಿಷ ದಸರಾ ಉದ್ಘಾಟನೆಗೆ ಪ್ರೋ. ಭಗವಾನ್ ಆಗಮನದ ಬಗ್ಗೆ ಕೆಲ ಸಂಘಟನೆಗಳು ಆಕ್ಷೇಪ ಎತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ 6 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ.
ಅಕ್ಟೋಬರ್ 19 ರಿಂದ 24ರ ವರೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಮೆರವಣಿಗೆ, ಪ್ರಚೋದನಾತ್ಮಕ ಭಾಷಣ, ಪೋಸ್ಟರ್, ಫ್ಲೆಕ್ಸ್ ಹಾಕಬಾರದು. ಈ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಘೋಷಣೆಗಳನ್ನು ಕೂಗುವುದು, ಆವೇಶಭರಿತರಾಗಿ ಭಾಷಣ ಮಾಡುವುದು, ಸಂಗೀತ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಶಸ್ತ್ರಗಳು, ದೊಣ್ಣೆ, ಕತ್ತಿಗಳು, ಈಟಿ, ಗದೆ, ಬಂದೂಕು, ಚಾಕು, ಕೋಲು, ಲಾಟಿಗಳು ಸೇರಿದಂತೆ ದೈಹಿಕ ಹಿಂಸೆಯನ್ನುಂಟು ಮಾಡುವ ಇತರೆ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
![DC Meena Nagaraj](https://etvbharatimages.akamaized.net/etvbharat/prod-images/19-10-2023/kn-ckm-03-nishedagne-av-7202347_18102023224740_1810f_1697649460_983.jpg)
ಇನ್ನು ಪಟಾಕಿಗಳನ್ನು ಸಿಡಿಸುವುದು, ಯಾವುದೇ ಸ್ಫೋಟಕಗಳನ್ನು ಒಯ್ಯುಲು ಅವಕಾಶವಿಲ್ಲ. ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈ ಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 20 ರಂದು ಮಹಿಷ ದಸರಾ ಅಂಗವಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ನಿಂದ ಆಜಾದ್ ಪಾರ್ಕ್ ಸರ್ಕಲ್ವರೆಗೆ ಮೆರವಣಿಗೆ ನಡೆಸಲು ಮಹಿಷ ದಸರಾ ಆಚರಣಾ ಸಮಿತಿ ಮುಂದಾಗಿತ್ತು. ಜೊತೆಗೆ, ಸಭಾ ಕಾರ್ಯಕ್ರಮವನ್ನು ಚಿಂತಕ ಪ್ರೊ. ಭಗವಾನ್ ನೆರವೇರಿಸಲಿದ್ದರು. ಆದರೆ ನಿಷೇಧಾಜ್ಞೆ ಜಾರಿಯಿಂದಾಗಿ ಮೆರವಣಿಗೆಗೆ ಅವಕಾಶ ಸಿಗುವುದು ಅನುಮಾನವಾಗಿದೆ. ಜೊತೆಗೆ, ಒಕ್ಕಲಿಗರ ಸಂಘ, ಶ್ರೀರಾಮ ಸೇನೆ ಕಾರ್ಯಕರ್ತರು ಚಿಕ್ಕಮಗಳೂರಿಗೆ ಭಗವಾನ್ ಬಂದಲ್ಲಿ ಅವರಿಗೆ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಭಗವಾನ್ ಚಿಕ್ಕಮಗಳೂರಿಗೆ ಬಾರದಂತೆ ಗಡಿಪಾರು ಮಾಡಬೇಕು ಎಂದು ಡಿಸಿಗೆ ಮನವಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಾಕ್ಷಸರ ಸಮರ್ಥನೆ ವಿಶೇಷವಲ್ಲ : ಚಕ್ರವರ್ತಿ ಸೂಲಿಬೆಲೆ
ಈ ಎಲ್ಲಾ ಘಟನಾವಳಿಗಳನ್ನು ಅವಲೋಕಿಸಿದ ಎಸ್ಪಿ ವಿಕ್ರಮ್ ಆಮಟೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಅ.19 ರಿಂದ 24ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸುವಂತೆ ಡಿಸಿ ಮೀನಾ ನಾಗರಾಜ್ ಅವರಿಗೆ ಶಿಫಾರಸು ಮಾಡಿದ್ದರು. ಎಸ್ ಪಿ ಶಿಫಾರಸ್ಸಿನ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.