ಚಿಕ್ಕಮಗಳೂರು; ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ನಿಂತರೂ ಬೆಟ್ಟ-ಗುಡ್ಡ, ಭೂಕುಸಿತ ನಿಲ್ಲುವ ಹಾಗೇ ಕಾಣಿಸುತ್ತಿಲ್ಲ. ಬೆಳಗ್ಗೆಯಿಂದ ಮಳೆ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕ್ಷೀಣಿಸಿದ್ದರೂ ಕಾಫಿ ತೋಟಗಳ ಭೂ ಕುಸಿತ ಮಾತ್ರ ಕಡಿಮೆಯಾಗುತ್ತಿಲ್ಲ.
ಶನಿವಾರ ಕೂಡ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಒಂದು ಎಕರೆ ಕಾಫಿತೋಟ ಕುಸಿದಿತ್ತು. ಇಂದು ಹನುಮನಹಳ್ಳಿಯಲ್ಲಿ ರತ್ನಾಕರ್ ಎಂಬುವರಿಗೆ ಸೇರಿದ ಸುಮಾರು ಎರಡು ಎಕರೆ ಕಾಫಿ ತೋಟ ಸಂಪೂರ್ಣ ಕುಸಿದಿದೆ. ಇದರಿಂದ ಅಡಿಕೆ, ಮೆಣಸು, ಕಾಫಿ ಕೊಚ್ಚಿ ಹೋಗಿದೆ. ಎರಡನೇ ಸುತ್ತಿನ ಮಳೆರಾಯನ ಅಬ್ಬರದಲ್ಲಿ ಭೂಮಿ ನಿಂತಲ್ಲೇ ಪಾತಾಳಕ್ಕೆ ಕುಸಿಯುತ್ತಿರೋದರಿಂದ ಮಲೆನಾಡಿಗರ ಆತಂಕ ಕೂಡ ಹೆಚ್ಚುತ್ತಲೇ ಇದೆ.
ಭಾನುವಾರ ಬೆಳಗ್ಗೆಯಿಂದ ವರುಣದೇವ ಸ್ವಲ್ಪ ಮಟ್ಟಿಗೆ ಶಾಂತನಾಗಿದ್ದು, ಸಂಜೆ ವೇಳೆಗೆ ಮತ್ತೆ ಅಬ್ಬರಿಸಿದ್ದಾನೆ. ಕಳಸ, ಕುದುರೆಮುಖ, ಹಿರೇಬೈಲು, ಸಂಸ್ಥೆ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರೆದಿದೆ. ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿಯಲ್ಲೂ ಸಾಧಾರಣ ಮಳೆ ಮುಂದುವರೆದಿದ್ದು, ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.
ನಿರಂತರ ಮಳೆಯ ಕಾರಣ ಮಲೆನಾಡು ಭಾಗದಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು. ವಾಹನ ಸಂಚಾರದಲ್ಲಿಯೂ ವ್ಯತ್ಯಯ ಕಂಡು ಬರುತ್ತಿದೆ. ಪದೇ ಪದೇ ಭೂ ಕುಸಿತ ಹಾಗೂ ತೋಟಗಳು ಕುಸಿತ ಆಗುತ್ತಿರುವುದರಿಂದಾಗಿ ಮಲೆನಾಡು ಜನರಲ್ಲಿ ಇನ್ನಷ್ಟು ಆತಂಕ ಮನೆ ಮಾಡುತ್ತಿದೆ.