ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಮತ್ತು ಘಟ್ಟ ಪ್ರದೇಶದ ಭಾಗದಲ್ಲಿ ನಿನ್ನೆ ಸಂಜೆಯಿಂದಲೂ ಧಾರಾಕಾರ ಮಳೆಯಾಗುತ್ತಿದೆ.
ನಿರಂತರವಾಗಿ ಬಿಟ್ಟು ಬಿಡದೆ ಧಾರಾಕಾರವಾಗಿ ವರುಣ ಅಬ್ಬರಿಸುತ್ತಿದ್ದು, ಪಶ್ಚಿಮ ಘಟ್ಟಗಳ ಸಾಲಲ್ಲೂ ಎಡಬಿಡದೆ ಮಳೆ ಸುರಿಯುತ್ತಿದೆ. ಪ್ರಮುಖವಾಗಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ, ಕುದುರೆಮುಖ, ಶೃಂಗೇರಿ, ಕೆರೆಕಟ್ಟೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಧಾರಾಕಾರ ಮಳೆಯಿಂದ ನದಿಗಳ ಹರಿವಿನ ಮಟ್ಟ ಹೆಚ್ಚಳ ಉಂಟಾಗಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ನಿರಂತರ ಮಳೆಯ ಕಾರಣ ಮಲೆನಾಡು ಭಾಗದ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯೂ ತಲೆದೋರಿದೆ.