ಚಿಕ್ಕಮಗಳೂರು: ಇಡೀ ರಾಜ್ಯಕ್ಕೆ ನಿಸರ್ಗವನ್ನು ಹಂಚುವಂತಹ ಶಕ್ತಿ ಚಿಕ್ಕಮಗಳೂರಿಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಜೊತೆಗೆ ವಿಶೇಷವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಚಿಕ್ಕಮಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಬಾರಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ. ಇವತ್ತು ಮಳೆ ಇದ್ದರೂ ಕೂಡ ಚಿಕ್ಕಮಗಳೂರಿಗೆ ಬಂದಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದರು.
2019ರ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ಸಿಗದ ಹಿನ್ನೆಲೆ, ಮೂಡಿಗೆರೆ ಕ್ಷೇತ್ರದ ಸಮಸ್ಯೆಯನ್ನು ವಿಶೇಷವಾಗಿ ಗಮನಿಸುತ್ತೇನೆ. ವರದಿ ತೆಗೆದುಕೊಂಡು ನ್ಯಾಯ ಸಮ್ಮತವಾಗಿ ಪರಿಹಾರ ನೀಡಲು ಸೂಚಿಸುತ್ತೇನೆ. ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇದೇ ರೀತಿ ಸಮಸ್ಯೆಯಾಗಿತ್ತು. ಪುನರ್ ಪರಿಶೀಲನೆ ಮಾಡಿ ನೈಜ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಧಾರಾಕಾರ ಮಳೆಯ ನಡುವೆ ಚಾಲನೆ: ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾದರು. ಆಗಿದ್ದಾರೆ. ನಗರದ ಎಐಟಿ ಕಾಲೇಜು ಆವರಣದಲ್ಲಿ ಈ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಸಿ.ಟಿ. ರವಿ, ಡಿ.ಎಸ್.ಸುರೇಶ್, ಎಂ.ಪಿ. ಕುಮಾರಸ್ವಾಮಿ, ಬೆಳ್ಳಿ ಪ್ರಕಾಶ್, ವಿಧಾನ ಪರಿಷತ್ ಪ್ರಾಣೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಉಪಸ್ಥಿತರಿದ್ದರು.
ಇಂದು ಬೆಳಗ್ಗೆಯೇ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ರಸ್ತೆ ಮಾರ್ಗವಾಗಿ ಸಿಎಂ ಆಗಮಿಸಿದ್ದು, ವಿಳಂಬವಾಗಿ ಧಾರಾಕಾರ ಮಳೆಯ ನಡುವೆಯೂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಇದನ್ನೂ ಓದಿ: ಪರಿಷ್ಕೃತ ಪಠ್ಯದ ಮುದ್ರಣ ತಡೆಹಿಡಿದು, ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ