ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೊದಲ ಕೆಎಫ್‍ಡಿ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆ ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಮಂಗನ ಕಾಯಿಲೆ (ಕೆ.ಎಫ್.ಡಿ) ಕಾಣಿಸಿಕೊಂಡಿದೆ. ಈ ಬಗ್ಗೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವೀರಪ್ರಸಾದ್ ಖಚಿತ ಪಡಿಸಿದ್ದಾರೆ.
ಓದಿ:ದುರಂತ: ನೂರಕ್ಕೂ ಹೆಚ್ಚು ಕುರಿಗಳು ನಿಗೂಢ ಸಾವು!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ ಮಂಗನ ಕಾಯಿಲೆಯ ಮೊದಲ ಪ್ರಕರಣ ಇದಾಗಿದ್ದು, ಪಾಸಿಟಿವ್ ಬಂದ ವ್ಯಕ್ತಿ ತೀರ್ಥಹಳ್ಳಿಯ ಆರಗದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಇವರಿಗೆ ಜ್ವರ ಬಂದ ಕಾರಣ ತೀರ್ಥಹಳ್ಳಿಯ ಆಸ್ಪತ್ರೆಯೊಂದರಿಂದ ರಕ್ತದ ಮಾದರಿಯನ್ನು ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಕೆಎಫ್‍ಡಿ ಪಾಸಿಟಿವ್ ಬಂದಿರುವುದು ಧೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ವತಿಯಿಂದ ಎನ್ ಆರ್ ಪುರ ತಾಲೂಕಿನ ಹೆಮ್ಮೂರು, ಕೊನೋಡಿ, ಬೆಮ್ಮನೆ, ಕಾರಹಡಲು, ಹೊನಗಾರು, ಮಕ್ಕಿಕೊಪ್ಪ ಸೇರಿ 6 ಹಳ್ಳಿಗಳ ಜನರಿಗೆ ಫೆ.26 ರಂದು ಕೆಎಫ್‍ಡಿ ಲಸಿಕೆ ಹಾಕಲಾಗುವುದು. ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.