ಚಿಕ್ಕಮಗಳೂರು: ಕಳೆದ ಸಾಲಿನ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕೋವಿಡ್-19 ವೈರಸ್ ಸಮಸ್ಯೆಯಿಂದ ಕಳೆದ ಸಾಲಿನ ಪರೀಕ್ಷಾ ಪ್ರಕ್ರಿಯೆ ಹಾಗೂ ಈ ಸಾಲಿನ ಶಾಲಾ ದಾಖಲಾತಿಗಳಿಗೆ ತೊಂದರೆಯಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಹೇಳಿದೆ.
ಖಾಸಗಿ ಶಾಲೆಗಳು, ಮಾರ್ಚ್ ಕೊನೆಯ ವಾರದಲ್ಲಿ ಲಾಕ್ಡೌನ್ನಿಂದ ಮುಚ್ಚಲಾದೆ. ಸಾಮಾನ್ಯವಾಗಿ ಶೈಕ್ಷಣಿಕ ವರ್ಷದ, ಎರಡನೇ ಅವಧಿಯ ಶಾಲಾ ಶುಲ್ಕ ಪಾವತಿ ಆಗದೆ ಮುಂದಿನ ಮೂರು ತಿಂಗಳು ಸಿಬ್ಬಂದಿಗಳ ವೇತನ ಪಾವತಿಸಲು ಅವಶ್ಯವಿದ್ದ ಹಣದ ಕೊರತೆ ಉಂಟಾಗಿದೆ. ಕಳೆದ ಸಾಲಿನ ಆರ್ಟಿಇ ಮರು ಪಾವತಿಯನ್ನು ಸರ್ಕಾರ ಮತ್ತು ಇಲಾಖೆಯಿಂದ ಬಿಡುಗಡೆ ಆಗದೆ ಇರುವುದರಿಂದ ಅದು ಕೂಡ ಖಾಸಗಿ ಶಾಲೆಗಳ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ. ಈ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ ಎನ್ನುವುದಕ್ಕೆ ಬಹುಪಾಲು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದು ಸಾಕ್ಷಿಯಾಗಿದೆ.
ರಾಜ್ಯಮಟ್ಟದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಕೊಡುತ್ತಾ ಬಂದಿದ್ದು, ಬಹುಪಾಲು ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಮಕ್ಕಳ ಬಗ್ಗೆ ವೈಯಕ್ತಿಕ ಆಸಕ್ತಿಯನ್ನು ಕೂಡ ವಹಿಸುತ್ತಿವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ಶಾಲೆಗಳು ಕಳೆದ ಎರಡು ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನವನ್ನು ನೀಡಿದ್ದು, ಜೂನ್ ತಿಂಗಳಿನಿಂದ ನೀಡಲು ಸಾಧ್ಯವಾಗೋದಿಲ್ಲ. ಕೆಲವು ಮಾಧ್ಯಮಗಳು ಹೇಳುತ್ತಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದೇ ವ್ಯಾವಹಾರಿಕ ಲಾಭವನ್ನು ಪಡೆಯುವ ಸಂಸ್ಥೆಗಳು ಆಗಿಲ್ಲ ಹಾಗೂ ಖಾಸಗಿ ಶಾಲೆಗಳು ಕೇವಲ ಲಾಭ ಪಡೆಯುವ ಉದ್ದೇಶದಿಂದ ಸ್ಥಾಪಿತವಾಗಿಲ್ಲ. ಇವುಗಳು ಸಮಾಜಮುಖಿ ಸಂಸ್ಥೆಗಳಾಗಿದ್ದು, ಮತ್ತು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಾಗಿವೆ. ಖಾಸಗಿ ಶಾಲೆಗಳ ಮೇಲಿನ ಕೆಟ್ಟ ಹಾಗೂ ತಪ್ಪು ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಮನವಿ ಮಾಡಿದೆ.