ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಉತ್ತಮೇಶ್ವರದ ಹೆದ್ದಂಸೆ ಗ್ರಾಮದ ಬಗ್ಗುಂಜಿಯಲ್ಲಿ ಪುರಾತನ ಹಗೇವು ಪತ್ತೆಯಾಗಿದ್ದು, ಶಿಕ್ಷಕ ಕಲ್ಕೆರೆ ಸುರೇಶ್ ಈ ಹಗೇವು ಬಗ್ಗೆ ತಿಳಿಸಿದ್ದಾರೆ.
ಸುಮಾರು ಎರಡೂವರೇ ಮೀಟರ್ ಆಳದ ಹಗೇವು, ನಾಲ್ಕು ಮೀಟರ್ ವ್ಯಾಸವನ್ನು ಹೊಂದಿದೆ. ಒಳಭಾಗದಲ್ಲಿ ಒಂದರ ತುಂದಿ ಇನ್ನೊಂದಕ್ಕೆ ಕಾಣದಷ್ಟು ವಿಸ್ತಾರವಾಗಿದ್ದು, ಆರು ತಿಂಗಳಿಂದ ಒಂದು ವರ್ಷಕ್ಕೆ ಸಾಕಗುವಷ್ಟು ಧಾನ್ಯಗಳನ್ನು ಇದರಲ್ಲಿ ಶೇಕರಣೆ ಮಾಡಬಹುದಾಗಿದೆಯಂತೆ.
ಈ ಹಗೇವು ಬೆಲ್ಲ ಹಾಗೂ ಸುಣ್ಣದಿಂದ ಮತ್ತು ಹುತ್ತದ ಮಣ್ಣಿನಿಂದ ನಿರ್ಮಾಣವಾಗಿದೆ. ಈ ಹಿಂದೆ ಧಾನ್ಯಗಳನ್ನು ಸಂರಕ್ಷಿಸುವ ಹಾಗೂ ಸುರಕ್ಷಿತವಾಗಿ ಇಡುವ ವಿಧಾನ ಇದಾಗಿದ್ದು, ಧಾನ್ಯಗಳು ಕೆಡದಂತೆ ಹಾಗೂ ಶತ್ರುಗಳಿಂದ ಇವುಗಳನ್ನು ಸುರಕ್ಷಿತವಾಗಿಡಲು ನಿರ್ಮಾಣ ಮಾಡಲಾತ್ತಿತ್ತು.
ಈಗಲೂ ಈ ಹಗೇವು ತುಂಬಾ ಗಟ್ಟಿಮುಟ್ಟಾಗಿದ್ದು ಧಾನ್ಯಗಳನ್ನು ಶೇಖರಣೆ ಮಾಡಲು ಈಗಲೂ ಯೋಗ್ಯವಾಗಿದೆ. 35 ಸೇ.ಮೀ. ಪ್ರಾರಂಭದಲ್ಲಿ ಅಗಲವಾಗಿದ್ದು, ನಂತರ ಭೂಮಿಯ ಒಳ ಹೋದಂತೆ ಅಗಲವಾಗುತ್ತ ದೊಡ್ಡದಾದ ಹಂಡೆಯ ರೂಪದಲ್ಲಿ ನಿರ್ಮಿತವಾಗಿದೆ.
ಸುಮಾರು 16ನೇ ಶತಮಾನದಲ್ಲಿ ಈ ಹಗೇವು ನಿರ್ಮಾಣ ಆಗಿರಬಹುದೆಂದು ಅಂದಾಜು ಮಾಡಲಾಗಿದ್ದು, ಅಕ್ಕಪಕ್ಕದಲ್ಲಿಯೇ ಹೆಂಚಿನ ಚೂರುಗಳು ಸಹ ಪತ್ತೆಯಾಗಿವೆ. ಈ ಹಿಂದೆ ಇಲ್ಲಿ ಮನೆಗಳು ನಿರ್ಮಾಣವಾಗಿರಬಹುದು ಎಂಬ ಅನುಮಾನ ಸ್ಥಳೀಯರದ್ದು.