ಚಿಕ್ಕಮಗಳೂರು: 15 ಸಾವಿರಕ್ಕೂ ಅಧಿಕ ವಾಹನಗಳು, 80 ಸಾವಿರಕ್ಕೂ ಹೆಚ್ಚು ಭಕ್ತರು. ಕಾಲಲ್ಲಿ ಚಪ್ಪಲಿ ಇಲ್ಲ, ನಡೆಯೋಕೆ ದಾರಿ ಇಲ್ಲ. ಆದರೂ ಬೆಟ್ಟದ ತಾಯಿಯನ್ನು ನೋಡುವ ತವಕ. ಇದು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ದೇವಿರಮ್ಮನ ದರ್ಶನ ಪಡೆಯೋಕೆ ಬಂದ ಭಕ್ತಸಾಗರ. ಸುಮಾರು 3,800 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ನೆಲೆಸಿರೋ ದೇವಿಯನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.
ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆದು ಪುನೀತರಾದ್ರು. ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ -ಮಳೆ ಕಾರಣಕ್ಕೆ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಆದ್ರೆ, ಈ ವರ್ಷ ಊಹೆಗೂ ಮೀರಿ ಭಕ್ತಸಾಗರ ಬೆಟ್ಟ ಹತ್ತಿ ಬೆಟ್ಟದ ತಾಯಿಯ ದರ್ಶನ ಪಡೆದಿದ್ದಾರೆ. ಬೆಟ್ಟದ ತುದಿಯಲ್ಲಿ ಅಜಾತಶತ್ರು ಅಪ್ಪುವಿನ ಫ್ಲೆಕ್ಸ್ ಹಾರಿದ್ದು ವಿಶೇಷವಾಗಿತ್ತು.
ಹೀಗೆ ಬೆಟ್ಟಗಳ ಸಾಲಲ್ಲಿ ಇರುವೆಯಂತೆ ತಳುಕುತ್ತಾ-ಬಳುಕುತ್ತಾ-ತೆವಳುತ್ತಾ ಅಕ್ಕಪಕ್ಕದವರ ನೆರವಿನಿಂದ ಸಾಗುತ್ತಿರುವ ಇವರೆಲ್ಲ ಬಿಂಡಿಗ ದೇವಿರಮ್ಮನ ಭಕ್ತರು. ವರ್ಷಕ್ಕೊಮ್ಮೆ ದರ್ಶನ ಕೊಡೋ ಬೆಟ್ಟದ ತಾಯಿಯನ್ನ ನೋಡೋಕೆ ಈ ವರ್ಷ ನಿರೀಕ್ಷೆಗೂ ಮೀರಿದ ಭಕ್ತವೃಂದ ಆಗಮಿಸಿತ್ತು. ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುತ್ತಿದ್ರು. ಆದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಹಾಗೂ ಕೊರೊನಾದಿಂದ ಜನಸಂಖ್ಯೆ ಕ್ಷೀಣಿಸಿತ್ತು.
ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ: ಆದರೆ, ಈ ವರ್ಷ ಮಧ್ಯರಾತ್ರಿಯಿಂದಲೇ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಅಂದಾಜು 80 ಸಾವಿರ ದಾಟಿದೆ. ಲಕ್ಷದ ಗಡಿಯೂ ಮುಟ್ಟಬಹುದು. ದೀಪಾವಳಿ ಅಮಾವಾಸೆಯ ಹಿಂದಿನ ದಿನ ಬೆಟ್ಟದಲ್ಲಿರುವ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರ್ತಾರೆ.
ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬಂದೇ ಬರ್ತಾರೆ. ವಿದ್ಯುತ್ ಸಂಪರ್ಕ ಕೂಡ ಇಲ್ಲದ ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಹಿಂದಿನ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ. ಬೆಟ್ಟವನ್ನೇರುವಾಗಿ ಕೊಂಚ ಎಡವಿದ್ರು ಪಾತಾಳ ಸೇರೋದು ಗ್ಯಾರಂಟಿ.
ಸಂಜೆ ದೀಪ ಬೆಳಗಿದ ನಂತರವೇ ಊಟ: ಇಲ್ಲಿ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸುತ್ತಾರೆ. ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದಲ್ಲಿರುವ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯೋದು. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು.
ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನ ಆಚರಿಸೋದು. ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧವಿತ್ತು. ಪ್ರತಿವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಪೂಜೆ ವಸ್ತುಗಳು ಬರುತ್ತದೆ. ಇನ್ನು ಈ ವರ್ಷ ಸಾವಿರಾರು ಅಪ್ಪು ಫ್ಯಾನ್ಸ್ ಕೂಡ ಬೆಟ್ಟ ಹತ್ತಿದ್ದು, ಅಪ್ಪುವಿನ ಫ್ಲೆಕ್ಸ್ ಕೂಡ ಗುಡ್ಡದ ತುದಿಯಲ್ಲಿ ಹಾರಾಡಿದ್ದು ವಿಶೇಷವಾಗಿತ್ತು.
ಪೊಲೀಸರು ಹೈರಾಣು: ಬೆಟ್ಟದ ತಾಯಿಯನ್ನ ನೋಡೋಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವನ್ನ ಸವಿಯೋಕೆ ಬರುವವರು ಉಂಟು, ಪ್ರೇಮಿಗಳು ಉಂಟು, ಕಷ್ಟವನ್ನ ಪರಿಹರಿಸೆ ತಾಯಿ ಅಂತ ಬೇಡೋರು ಉಂಟು, ಬೆಟ್ಟ ಹತ್ತಿ ಎಂಜಾಯ್ ಮಾಡೋರು ಇದ್ದಾರೆ. ಆದರೆ ಆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರುವ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತವಾಗದಂತೆ ಕಾಯ್ತಿದ್ದಾಳೆ. ಒಂದು ರಾತ್ರಿ - ಒಂದು ಹಗಲಲ್ಲಿ ಬರುವ ಸುಮಾರು ಲಕ್ಷದಷ್ಟು ಭಕ್ತರನ್ನ ನಿಭಾಯಿಸಿ-ಸಂಭಾಳಿಸುವಷ್ಟರಲ್ಲಿ ಪೊಲೀಸರು ಮಾತ್ರ ಹೈರಾಣಾಗಿರುತ್ತಾರೆ.
ಇದನ್ನೂ ಓದಿ: ದೀಪಾವಳಿಯಂದು ಮಾತ್ರ ದರ್ಶನ ನೀಡುವ ದೇವಿರಮ್ಮ.. ಮಲ್ಲೇನಹಳ್ಳಿಗೆ ಹರಿದುಬಂದ ಭಕ್ತಸಾಗರ