ಚಿಕ್ಕಮಗಳೂರು: ಭಾಷೆ ಹೆಸರಿನಲ್ಲಿ ಗಲಭೆ ಎಬ್ಬಿಸುವಂತಹ ಸಂಘಟನೆಗಳ ವಿರುದ್ಧ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ಮೇಲೆ ನನ್ನ ಯಾವುದೇ ತಕರಾರು ಇಲ್ಲ. ಕನ್ನಡದ ಬಗ್ಗೆ ಅಭಿಮಾನ ಕನ್ನಡಿಗನಿಗೆ ಇರೋದು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಪ್ರತಿ ಸಂದರ್ಭದಲ್ಲಿ ಗಲಭೆ ಹುಟ್ಟುಹಾಕುವ ಸಂಚು ಮಾಡುವ ಜನರಿದ್ದಾರೆ. ಅದಕ್ಕೆ ತುಕಡೇ ಗ್ಯಾಂಗ್ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಸೌಹಾರ್ದತೆ ಕೆಡಿಸುವ ಜನರನ್ನು ನಾವು ಹೊರಗಿಡಬೇಕು. ಸೌಹಾರ್ದತೆ ಉಳಿಸಿಕೊಂಡು ಹೋಗಬೇಕು. ಭಾಷವಾರು ಪ್ರಾಂತ್ಯಕ್ಕೆ ಮುಂಚೆ ನೂರಾರು ಸಂಸ್ಥಾನಗಳು ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದವು. ಚೋಳರ ಆಳ್ವಿಕೆ ಶತಮಾನಗಳ ಕಾಲ ಕರ್ನಾಟಕದಲ್ಲಿ ನಡೆದಿದೆ. ಆದರೆ ಅವರು ತಮಿಳು ಭಾಷೆಯನ್ನು ಕರ್ನಾಟಕದ ಮೇಲೆ ಹೇರಿಲ್ಲ ಎಂದು ತಿಳಿಸಿದರು.
ಇನ್ನು, ಭಾಷೆಗಾಗಿ ಯುದ್ಧ ನಡೆದಿಲ್ಲ. ಹಾಗೆಯೇ ಒಂದು ಭಾಷೆ ಇನ್ನೊಂದು ಭಾಷೆಯನ್ನು ಕೊಂದಿಲ್ಲ. ಒಂದು ಭಾಷೆ ಇನ್ನೊಂದು ಭಾಷೆಯನ್ನು ಸಹೋದರ ಭಾಷೆ ಎಂದು ತಿಳಿದು ಬೆಳೆಸುವ ಕೆಲಸ ಮಾಡಿ ಜೊತೆಗೆ ತಾನು ಬೆಳೆದಿದೆ ಎಂದು ಸಚಿವ ಸಿ ಟಿ ರವಿ ಹೇಳಿದರು.