ಚಿಕ್ಕಮಗಳೂರು : ಚುನಾವಣಾ ಫಲಿತಾಂಶದಿಂದ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಮುನ್ಸೂಚನೆ ಸಿಕ್ಕಿದೆ. ಸರ್ವೆ ಲೆಕ್ಕಾಚಾರಗಳು ತಲೆ ಕೆಳಗಾಗಿದೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಫಲಿತಾಂಶಕ್ಕೆ ಲಕ್ಷಾಂತರ ಕಾರ್ಯಕರ್ತರು ದುಡಿದಿದ್ದಾರೆ. ಚುನಾವಣಾ ಗೆಲುವಿನ ತಂತ್ರ ಮಾಡಿದ್ದು ಅಮಿತ್ ಶಾ ಎಂದ ಅವರು, ಚುನಾವಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಚುನಾವಣೆ ಫಲಿತಾಂಶ ನಮಗೆ ಗೆಲುವಿನ ವಿಶ್ವಾಸ ಮೂಡಿಸಿದೆ. ಪ್ರತಿ ಗೆಲುವು ಆಯಾ ರಾಜಕೀಯ ಪಕ್ಷಗಳಿಗೆ ಆತ್ಮ ವಿಶ್ವಾಸ ಮೂಡಿಸುತ್ತದೆ. ಸೋತಾಗ ನಮಗೆ ನಿರಾಸೆಯಾಗಿದ್ದು ನಿಜ. ಆತ್ಮವಿಶ್ವಾಸದಿಂದ ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ನವರು ಈಗಲಾದರೂ ಜನಾದೇಶ ಸ್ವೀಕಾರ ಮಾಡಲಿ. ಗೆದ್ದಾಗ ಜನಾದೇಶ, ಸೋತಾಗ ಇವಿಎಂ ದೋಷ ಎಂದು ಹೇಳಬಾರದು. ಸೋಲಿರಲಿ, ಗೆಲುವಿರಲಿ ಜನಾದೇಶ ಸ್ವೀಕಾರ ಮಾಡಬೇಕು ಎಂದರು.
ಕರ್ನಾಟಕ ಸೋಲಿನ ಬಳಿಕ ಕೇಂದ್ರೀಯ ನಾಯಕತ್ವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಮುಂಚಿತವಾಗಿ ಟಿಕೆಟ್ ಘೋಷಣೆ, ಗ್ಯಾರಂಟಿಗೆ ಕೌಂಟರ್ ಮಾಡುವ ಕೆಲಸ ಮಾಡಿದ್ದೇವೆ. ಮೋದಿಯವರು ಇದು ಮೋದಿ ಗ್ಯಾರಂಟಿ ಎಂದು ಹೇಳಿದ್ರು, ತೆಲಂಗಾಣದಲ್ಲಿ ಬಿಜೆಪಿ ಪರ್ಯಾಯ ಪಾರ್ಟಿ ಆಗುವ ಅವಕಾಶ ಇತ್ತು. ಕೆಲವು ನಿರ್ಣಯ ಅನುಕೂಲ, ಹಾಗೂ ಅನಾನುಕೂಲವಾಗಿತ್ತು ಎಂದು ತೆಲಂಗಾಣದ ಬಿಜೆಪಿ ಸೋಲನ್ನು ವಿಶ್ಲೇಷಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಕರ್ನಾಟಕದಲ್ಲಿ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ಕೊಟ್ಟಾಗ ಎಚ್ಚರಿಕೆ ವಹಿಸಬೇಕಿತ್ತು. ಒಳ ಮೀಸಲಾತಿ ಮನವರಿಕೆ ಮಾಡಿ ಕೊಡುವಲ್ಲಿ ವಿಫಲವಾಗಿದ್ವಿ, ತುಂಬಾ ಕಡೆ ಗ್ಯಾರಂಟಿ ಕೆಲಸ ಮಾಡಿದೆ. ಹತ್ತಾರು ವಿಚಾರಗಳು ನಮ್ಮ ವಿರುದ್ಧ ಕೆಲಸ ಮಾಡಿತ್ತು. ಮೋದಿ ತುಂಬಾ ಎತ್ತರದ ನಾಯಕ. ಅವರ ಪ್ರಭಾವ ಪ್ರತಿ ಚುನಾವಣೆ ಮೇಲೆ ಇದ್ದೇ ಇರುತ್ತೆ. ಕಾರ್ಯಕರ್ತರ ಶ್ರಮ, ಮೋದಿ ಪ್ರಭಾವ ಕೆಲಸ ಮಾಡಿದೆ ಎಂದು ತಿಳಿಸಿದರು.
ಮಧ್ಯಪ್ರದೇಶದಲ್ಲಿ 48 ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಅದರಲ್ಲಿ 35ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು. ಪ್ರತಿ ಚುನಾವಣೆಗೂ ಭಿನ್ನ ವಿಚಾರ ಪ್ರಭಾವ ಬೀರುತ್ತೆ. ಕಾಂಗ್ರೆಸ್ ಸರ್ಕಾರದ ಎಟಿಎಂ ತೆಲಂಗಾಣದಲ್ಲಿ ಕೆಲಸ ಮಾಡಿದೆ. ಸೋಲನ್ನು ಅರ್ಥೈಸಿಕೊಂಡು ಮುನ್ನಡೆದರೆ ಮುಂದೆ ಗೆಲುವು ಸಾಧ್ಯ ಎಂದು ಮಾಜಿ ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಮತದಾರರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು : ಸಚಿವ ಎಂ ಬಿ ಪಾಟೀಲ್