ಚಿಕ್ಕಮಗಳೂರು: ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನ ಮಾಡುವ ವಿಚಾರ ಹೇಗೆ ಪ್ರಾರಂಭವಾಗಿದೆಯೋ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆ ರೀತಿಯ ಯಾವುದೇ ಪ್ರಸ್ತಾವನೆ ನಮ್ಮ ಪಕ್ಷಕ್ಕೆ ಬಂದಿಲ್ಲ, ಅವರದ್ದು ಸ್ವತಂತ್ರ ಪಕ್ಷ. ಈಗಾಗಲೇ ಮುಖ್ಯಮಂತ್ರಿಗಳು ಈ ಕುರಿತು ಸ್ವಷ್ಟನೆ ನೀಡಿದ್ದಾರೆ. ಈ ರೀತಿ ಮಾತನಾಡುವುದರಿಂದ ದೇವೇಗೌಡರ ಮನಸ್ಸಿಗೆ ಘಾಸಿಯಾಗುತ್ತದೆ ಎಂದು ಹೇಳಿದರು.
ದೇಶದ ವಿಚಾರಕ್ಕೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಿಗೆ ನಿಲ್ಲಬೇಕು. ನಮ್ಮ ರಾಜಕೀಯ ವೈಚಾರಿಕ ಭಿನ್ನತೆ ಬಂದಾಗ ಎದುರು-ಬದುರು ನಿಲ್ಲಬೇಕು. ಇದನ್ನು ಎಲ್ಲಾ ರಾಜಕೀಯ ಪಕ್ಷಗಳು ಪಾಲಿಸಬೇಕು. ನಾವು ಜೆಡಿಎಸ್ನಿಂದ ನಿರೀಕ್ಷೆ ಮಾಡುವುದು ಸಮುದಾಯದ ಹಿತ ಹಾಗೂ ದೇಶದ ಹಿತದ ಪ್ರಶ್ನೆ ಬಂದಾಗ ನೀವು ನಮ್ಮ ಜೊತೆ ನಿಂತುಕೊಳ್ಳಿ ಎಂದು. ವಿಲೀನದ ಅವಶ್ಯಕತೆ ಅವರಿಗೂ ಇಲ್ಲ, ನಮಗೂ ಇಲ್ಲ. ನಮಗೆ ಸ್ಪಷ್ಟ ಬಹುಮತವಿದೆ ಎಂದರು.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸೇರಿ ಮೈತ್ರಿ ಮಾಡಿಕೊಂಡಿದ್ದರು. ಆದರೆ ಅಲ್ಲಿಂದ ರಾಜೀನಾಮೆ ಕೊಟ್ಟು ಬಂದ 12 ಜನ ಬಿಜೆಪಿಯಲ್ಲಿ ಗೆದ್ದಿದ್ದಾರೆ. ಈಗ ಮೈತ್ರಿ ಮಾಡಿಕೊಂಡರೆ ಜೆಡಿಎಸ್ಗೆ ಲಾಭವಿಲ್ಲ. ಅವರು ನಮ್ಮ ಪಕ್ಷಕ್ಕೆ ಬರದಿದ್ದರೆ ನಷ್ಟವೂ ಆಗುವುದಿಲ್ಲ. ವಿಷಯಾಧಾರಿತವಾಗಿ ಬೆಂಬಲ ನೀಡುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.