ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದ್ದು, ಸ್ಥಳೀಯ ಅನ್ನದಾತರಲ್ಲಿ ಆತಂಕ ಮನೆಮಾಡಿದೆ.
ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಾವಳಿ ನಿರಂತರವಾಗಿ ಸಾಗುತ್ತಿದ್ದು, ಜಿಲ್ಲೆಯ ಬಾಳೆಹೊನ್ನೂರಿನ ಮುದುಗುಣಿ ಗ್ರಾಮದ ರೈತ ಮರೀಗೌಡ ಅವರ ಕಾಫೀ ಹಾಗೂ ಅಡಕೆ ತೋಟಕ್ಕೆ ಎರಡು ಕಾಡಾನೆ ಹಾಗೂ ಒಂದು ಮರಿ ಆನೆ ನುಗ್ಗಿ ದಾಳಿ ಮಾಡಿದೆ. ಹತ್ತಾರು ಅಡಕೆ ಮರಗಳನ್ನು ತುಳಿದು ನಾಶ ಮಾಡಿದ್ದು, ಇದರಿಂದ ರೈತನಿಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಕಾಡನೆ ದಾಳಿಯಿಂದ ಸ್ಥಳೀಯ ರೈತರಲ್ಲಿ ಆತಂಕ ಮೂಡಿದ್ದು, ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.