ಚಿಕ್ಕಮಗಳೂರು: ಮನೆಯಲ್ಲಿ ಮುದ್ದೆ ಊಟ ಮಾಡಿ ಅಸ್ವಸ್ಥಗೊಂಡು ತಂದೆ-ಮಗಳು ಸಾವಿಗೀಡಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲೂಕಿನ ದೊಡ್ಡ ಪಟ್ಟಣಗೆರೆ ಗ್ರಾಮದ ದೊಡ್ಡ ಯಲ್ಲಪ್ಪ(75), ಯಲ್ಲಮ್ಮ (50) ಮೃತರು. ಈ ಕುರಿತು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡ ಪಟ್ಟಣಗೆರೆ ಗ್ರಾಮದ ತಮ್ಮ ಮನೆಯಲ್ಲಿ ಕಳೆದ ರಾತ್ರಿ ಮಗಳು ಯಲ್ಲಮ್ಮ ತಯಾರಿಸಿದ ಮುದ್ದೆ ಊಟವನ್ನು ತಂದೆ ದೊಡ್ಡ ಯಲ್ಲಪ್ಪ ಮತ್ತು ಸಹೋದರ ಸಣ್ಣ ಯಲ್ಲಪ್ಪ ಸೇರಿಕೊಂಡು ಊಟ ಮಾಡಿದ್ದಾರೆ. ಊಟದ ಬಳಿಕ ಮೂವರಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅಸ್ವಸ್ಥರಾಗಿದ್ದ ಮೂವರನ್ನು ಕಡೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವ ಕುರಿತು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಡೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಪರಿಣಾಮ ದೊಡ್ಡ ಯಲ್ಲಪ್ಪ ಮತ್ತು ಮಗಳು ಯಲ್ಲಮ್ಮ ಸಾವಿಗೀಡಾದರೆ. ಮತ್ತೊಬ್ಬ ಸಹೋದರ ಸಣ್ಣ ಯಲ್ಲಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುದ್ದೆ ಊಟ ಮಾಡಿ ಸಾವನ್ನಪ್ಪಿರುವ ಬಗ್ಗೆ ಹಲವು ಶಂಕೆ ವ್ಯಕ್ತಪಡಿಸಲಾಗಿದೆ. ಅಳಿದುಳಿದಿದ್ದ ಮುದ್ದೆಯ ಆಹಾರವನ್ನು ಅಲ್ಲಿದ್ದ ಕೋಳಿ ಮರಿಗಳು ಕೂಡ ಸೇವಿಸಿ ಸ್ಥಳದಲ್ಲೇ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಎಫ್ ಎಸ್ ಎಲ್ ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ಕಡೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ವಿವಾಹೇತರ ಸಂಬಂಧದ ಅನುಮಾನ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ