ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಬಹುತೇಕ ಎರಡು ತಿಂಗಳ ಕಾಲ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಬಂದ್ ಆಗಿದ್ದ ಎಲ್ಲಾ ಪ್ರವಾಸಿ ತಾಣಗಳು, ಹೋಂ ಸ್ಟೇಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿವೆ.
ಈ ಮಧ್ಯೆ ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ನಿಧಾನವಾಗಿ ಚಿಕ್ಕಮಗಳೂರು ಜಿಲ್ಲೆಯತ್ತ ಬರುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ತಪಾಸಣೆ ಮಾಡಲು ಸರಿಯಾದ ವ್ಯವಸ್ಥೆ ಆಗಿಲ್ಲ. ಒಂದು ವೇಳೆ ಕೊರೊನಾ ಸೋಂಕು ತಗುಲಿರುವವರು ಪ್ರವಾಸಿ ತಾಣಗಳಿಗೆ ಬಂದರೆ ಮುಂದೇನು ಗತಿ ಎಂಬ ಭಯ ಜನರಲ್ಲಿ ಕಾಡಲಾರಂಭಿಸಿದೆ.
ಈ ಹಿಂದೆ ಚೆಕ್ಪೋಸ್ಟ್ಗಳಲ್ಲಿ ಜಿಲ್ಲೆಗೆ ಬರುವ ಹಾಗೂ ಜಿಲ್ಲೆಯಿಂದ ಹೊರಗೆ ಹೋಗುವ ಜನರ ತಪಾಸಣೆ ಹಾಗೂ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಆದರೆ ಈ ವ್ಯವಸ್ಥೆ ಈಗ ಇಲ್ಲ. ಪ್ರವಾಸಿ ತಾಣಗಳಿಗೆ ಹೋಗುವ ಚೆಕ್ ಪೋಸ್ಟ್ನಲ್ಲಿ ಮಾತ್ರ ಈ ರೀತಿಯಾ ವ್ಯವಸ್ಥೆ ಇದೆ. ಪ್ರವಾಸಿಗರಿಗೆ ಯಾವುದೇ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ಈ ಹಿಂದೆ ಇದ್ದಂತೆ ಜಿಲ್ಲೆಯ ಗಡಿಯಲ್ಲಿ ಪ್ರವಾಸಿಗರ ಆರೋಗ್ಯ ತಪಾಸಣೆ ಮಾಡಿದರೆ ಮಾತ್ರ ಸೋಂಕಿತರು ಬರುವುದನ್ನು ತಡೆಯಬಹುದು. ಜಿಲ್ಲೆಯ ಜನರು ನೆಮ್ಮದಿಯಿಂದ ಜೀವನ ಮಾಡಬಹುದು ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಪ್ರವಾಸಿ ತಾಣಗಳು ತೆರೆದಿದ್ದು, ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದರಿಂದ ಜಿಲ್ಲೆಯ ಜನತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.