ಚಿಕ್ಕಮಗಳೂರು : ಗಂಭೀರ ಪ್ರಕರಣದಲ್ಲಿ ಆರೋಪಿಯನ್ನು ಹಿಡಿದಾಗ ಡ್ರಗ್ಸ್, ಅಕ್ರಮ ಹಣ ವರ್ಗಾವಣೆಯಲ್ಲಿ ಹಣ ಜಪ್ತಿಯಂತಹ ಕೇಸ್ ಬೇಧಿಸಿದಾಗ ಪೊಲೀಸರಿಗೆ ಅವಾರ್ಡ್ ನೀಡುವುದನ್ನು ನೋಡಿದ್ದೇವೆ.
ಆದರೆ, ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರು ತಮ್ಮ ಪೊಲೀಸ್ ಸಿಬ್ಬಂದಿಗೆ ಬೇರೆಯದ್ದೇ ಟಾಸ್ಕ್ ನೀಡಿದ್ದಾರೆ. ಅದು ಆರೋಗ್ಯ ಕಾಪಾಡಿಕೊಂಡು ಫಿಟ್ ಆದರೆ ರಿವಾರ್ಡ್ ನೀಡುವ ಆಫರ್ ಘೋಷಿಸಿದ್ದಾರೆ.
ಕೆಲಸದ ಅವಧಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಏನೇನನ್ನೋ ತಿಂದು ದೇಹದ ಸಮತೋಲನ ಕಳೆದುಕೊಂಡ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅಕ್ಷಯ್ ಅವರು 'ಆರೋಗ್ಯ' ಟಾಸ್ಕ್ ನೀಡಿದ್ದಾರೆ. ಅಂದರೆ ಯಾರು ದೇಹವನ್ನು ಫಿಟ್ ಇಟ್ಟುಕೊಳ್ಳುತ್ತಾರೋ ಅಂಥವರಿಗೆ ರಿವಾರ್ಡ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಎಸ್ಪಿ ಹೇಳಿದ್ದೇನು?: ಕೊರೊನಾ ವೇಳೆ ಆರೋಗ್ಯದ ಬಗ್ಗೆ ಗಮನ ನೀಡದೆ ಜನರಿಗಾಗಿ ಪೊಲೀಸರು ಕೆಲಸ ಮಾಡಿದ್ದರು. ವಾರದ ಪರೇಡ್‍ನಲ್ಲಿ ಹೆಚ್ಚಿನ ಸಿಬ್ಬಂದಿ ಆರೋಗ್ಯ ಸಮತೋಲನ ಕಾಪಾಡಿಕೊಳ್ಳದೇ ಇರುವುದು ಕಂಡು ಬಂದಿತ್ತು.
ಕೆಲಸದ ನಿಮಿತ್ತ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಇಲ್ಲದೇ ಸಿಬ್ಬಂದಿಯ ದೇಹ ಊದಿಕೊಂಡಿದೆ. ಗ್ಯಾಸ್ಟ್ರಿಕ್ ಹೆಚ್ಚುವುದರ ಜೊತೆಗೆ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇದೆ.
ಹೀಗಾಗಿ, ಅವರ ದೇಹದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಫಿಟ್ ಆಗಿರಲು ಟಾಸ್ಕ್ ನೀಡಲಾಗಿದೆ. ಯಾರು ದೇಹವನ್ನು ಹುರಿಗಟ್ಟುತ್ತಾರೋ ಅವರಿಗೆ ರಿವಾರ್ಡ್ ನೀಡಲಾಗುವುದು ಎಂದು ಎಸ್ಪಿ ಅಕ್ಷಯ್ ಹೇಳಿದ್ದಾರೆ.
ಶುರುವಾದ ಕಸರತ್ತು : ಇನ್ನು ಎಸ್ಪಿ ಆಫರ್ನಿಂದ ಪ್ರೇರೇಪಿತರಾದ ಪೊಲೀಸರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಸರತ್ತು ಶುರು ಮಾಡಿದ್ದಾರೆ. ಸೇವೆಯ ವೇಳೆ ಬಿಡುವು ಸಿಕ್ಕಾಗೆಲ್ಲಾ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಅಂತೆಲ್ಲಾ ವರ್ಕೌಟ್ ಮಾಡ್ತಿದ್ದಾರೆ.
ಓದಿ: ಗುಪ್ತಚರ ಇಲಾಖೆ ಕಟ್ಟಡದ ಮೇಲೆ ದಾಳಿ: ವಿಭಿನ್ನ ಹೇಳಿಕೆ ನೀಡಿದ ಸಿಎಂ - ಡಿಜಿಪಿ