ಚಿಕ್ಕಮಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿಟಿ ರವಿ ವಿರುದ್ಧ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಂಡಾಯದ ಕಹಳೆ ಮೊಳಗಿದೆ.
20 ವರ್ಷಗಳ ಬಳಿಕ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಬಂಡಾಯದ ಬಾವುಟ ಹಾರಿದೆ. ತನಗೇ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಮುಖಂಡ ನಗರಸಭೆ ಮಾಜಿ ಅಧ್ಯಕ್ಷ ಹೆಚ್ಡಿ ತಮ್ಮಯ್ಯ ಅವರು ಬಿಜೆಪಿಯ ಜಿಲ್ಲಾಧ್ಯಕ್ಷರ ಬಳಿ ತಮ್ಮ ಬೆಂಬಲಿಗರೊಂದಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ನಾಲ್ಕು ಬಾರಿ ನಗರಸಭೆ ಸದಸ್ಯನಾಗಿ, ಈಗ ಮಾಜಿ ಅಧ್ಯಕ್ಷನಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ. ಕಾರ್ಯಕರ್ತರು ಮತ್ತು ನಮ್ಮ ಮನದಾಳ ಏನು ಎಂಬುದು ಪಕ್ಷದ ಜಿಲ್ಲಾಧ್ಯಕ್ಷರಿಗೆ ಮನವರಿಕೆ ಆಗಿದೆ ಎಂದು ಹೇಳಿದರು.
15 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿರುವ ತಮ್ಮಯ್ಯ ಬೆಂಬಲಿಗರೊಂದಿಗೆ ಆಗಮಿಸಿ ಇಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪಗೆ ಮನವಿ ಸಲ್ಲಿಸಿದ್ದಾರೆ. ನಾಲ್ಕು ಬಾರಿ ನಗರಸಭೆ ಸದಸ್ಯರೂ ಆಗಿದ್ದ ತಮ್ಮಯ್ಯ ಲಿಂಗಾಯತ ಸಮುದಾಯದವರಾಗಿದ್ದಾರೆ.
ತಮ್ಮಯ್ಯ ನೀಡಿರುವ ಮನವಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಅಧ್ಯಕ್ಷ ಕಲ್ಮರುಡಪ್ಪ ಅವರು, ಪ್ರಜಾಪ್ರಭುತ್ವದ ಲಕ್ಷಣ ಇದಾಗಿದ್ದು, ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಯಾರಿಗೇ ಟಿಕೆಟ್ ನೀಡಿದರು ಅವರ ಪರವಾಗಿ ಎಲ್ಲರೂ ಸೇರಿ ಹುಮ್ಮಸ್ಸಿನಿಂದ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ:ಹಳೆ ಮೈಸೂರು ಗೆಲ್ಲಲು ಶಾರ್ಟ್ ಟರ್ಮ್, ಲಾಂಗ್ ಟರ್ಮ್ ಪ್ಲಾನ್ : ಸಿ ಟಿ ರವಿ