ಚಿಕ್ಕಮಗಳೂರು: ಕೊರೋನಾ ಎರಡನೇ ಅಲೆಯ ಆರಂಭದ ದಿನಗಳಲ್ಲಿ ಪ್ರತಿನಿತ್ಯ 20-30-40 ಬರುತ್ತಿದ್ದ ಕೊರೋನಾ ಕೇಸ್‌ಗಳ ಸಂಖ್ಯೆ ಕಳೆದ ಮೂರ್ನಾಲ್ಕು ದಿನದಿಂದ ನೂರರ ಗಡಿ ದಾಟಿದೆ. ನಿನ್ನೆ ಜಿಲ್ಲೆಯಲ್ಲಿ 198 ಪ್ರಕರಣಗಳು ಪತ್ತೆಯಾಗಿವೆ. ಹೀಗೆ ದಿನೇ ದಿನೆ ಹೆಚ್ಚುತ್ತಿರೋ ಕೇಸ್‍ಗಳನ್ನ ನಿಯಂತ್ರಿಸಲು ಜಿಲ್ಲಾಡಳಿತ ಲಾಕ್‍ಡೌನ್‍ಗೆ ಮುಂದಾಗಿದ್ದು, ನಿನ್ನೆಯಿಂದ ಮೇ 4ರವರೆಗೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇದನ್ನ ನಿಯಂತ್ರಣ ಮಾಡದಿದ್ದರೆ ಮುಂದೆ ಬಹಳ ಅನಾಹುತವಾಗಲಿದೆ ಎಂದು ಜಿಲ್ಲಾಧಿಕಾರಿ ರಮೇಶ್ ಲಾಕ್‍ಡೌನ್ ನಿರ್ಧಾರಕ್ಕೆ ಮುಂದಾಗಿದ್ದು, ಸಾರ್ವಜನಿಕರು ಈ ಹೆಮ್ಮಾರಿ ಕೊರೊನಾವನ್ನ ನಿಯಂತ್ರಿಸಲು ನಮ್ಮ ಜೊತೆ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳನ್ನ ಹೊರತುಪಡಿಸಿ ಇಡೀ ಜಿಲ್ಲೆಯನ್ನ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇಂದಿನಿಂದ 13 ದಿನಗಳ ಕಾಲ ಜಿಲ್ಲೆಯಲ್ಲಿ ಸಿನಿಮಾ ಟಾಕೀಸ್, ಮಾಲ್, ದೇವಸ್ಥಾನ, ಚರ್ಚ್, ಮಸೀದಿ, ಶಾಲಾ-ಕಾಲೇಜು ಎಲ್ಲವೂ ಬಂದ್ ಇರಲಿವೆ. ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟುಗಳನ್ನ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು 13 ದಿನ ಬಂದ್ ಮಾಡುವಂತೆ ಆದೇಶಿಸಿಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಅಂಗಡಿಯಲ್ಲೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನ ಕಡ್ಡಾಯವಾಗಿ ಕಾಪಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.