ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಕಳಸ ಬಳಿಯ ಹೆಬ್ಬಾಳೆ ಸೇತುವೆ ಸುಮಾರು 15-20 ವರ್ಷಗಳಿಂದಲೂ ಸಮಸ್ಯೆಯಿಂದ ಕೂಡಿದೆ. ಈ ಸೇತುವೆ ಮೇಲೆ ಹಾದು ಹೋಗುವ ಜನರಿಗೆ ಸಮಸ್ಯೆ ಕಾಡುತ್ತಿದೆ. ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ಎದುರಾಗಿದೆ. ಆದ್ರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಮೂರು ನಾಲ್ಕು ಅಡಿಗಳಷ್ಟು ಎತ್ತರದಲ್ಲಿ ಹರಿಯುತ್ತದೆ. ಮಳೆಯ ನೀರಿನಿಂದ ಈ ಸೇತುವೆ ಅದೆಷ್ಟೋ ಬಾರಿ ಮುಳುಗಡೆಯಾಗಿದೆ. ಕಳೆದ 15-20 ವರ್ಷಗಳಿಂದಲೂ ಈ ಸೇತುವೆ ಶಾಶ್ವತ ಸಮಸ್ಯೆ ಎದುರಿಸುತ್ತಿದೆ. ಬೇಸಿಗೆಯಲ್ಲಿ ಸೇತುವೆಯ ದುರಸ್ತಿ ಕಾರ್ಯ ಮಾಡುವುದಾಗಿ ಸರ್ಕಾರ ಹೇಳುತ್ತದೆ. ಆದ್ರೆ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ.
ಈ ಸೇತುವೆ ಮುಳುಗಡೆಯಾದರೆ ಯಾವ ವಾಹನವೂ ಸಂಚರಿಸುವಂತಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗೋದಕ್ಕೆ ಇದೇ ಪ್ರಮುಖ ದಾರಿ. ಈ ಸೇತುವೆ ಮೇಲಿಂದಲೇ ಪ್ರವಾಸಿಗರು, ಸ್ಥಳೀಯರು, ಭಕ್ತರು ದೇವಸ್ಥಾನಕ್ಕೆ ಹೋಗಬೇಕು. ಹೊರ ರಾಜ್ಯ, ಜಿಲ್ಲೆ, ಅಂತರ್ ಜಿಲ್ಲೆಯ ವಾಹನಗಳು ಈ ಸೇತುವೆ ಮೇಲೆ ಹಾದು ಹೊಗುತ್ತವೆ.
ಈ ಹೆಬ್ಬಾಳೆ ಸೇತುವೆಗೆ ಎರಡೂ ಭಾಗದಲ್ಲಿಯೂ ಯಾವುದೇ ತಡೆ ಗೋಡೆಗಳಿಲ್ಲ. ರಾತ್ರಿ ವೇಳೆ, ವಾಹನ ಸ್ವಲ್ಪ ಜಾರಿದರೂ ಕೂಡ ನದಿ ಪಾಲಾಗೋದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಮಾರ್ಗವಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನ ಪಡೆಯೋಕೆ ಹೋಗೋ ಪ್ರವಾಸಿಗರೇ ಹೆಚ್ಚು. ರಸ್ತೆ ಹಾಗೂ ಕರ್ವ್ ಪರಿಚಯವಿರೋ ಚಾಲಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಒಂದು ವೇಳೆ ಹೊಸಬರು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಮಾರ್ಗ ನೀರಿನಲ್ಲಿ ಮುಳುಗಿದರೆ ಹತ್ತಾರು ಕಿ.ಮೀ. ಸುತ್ತಿಕೊಂಡು ದೇಗುಲಕ್ಕೆ ಹೋಗಬೇಕಾಗುತ್ತೆ.
ಒಟ್ಟಾರೆಯಾಗಿ ಏಳೆಂಟು ತಿಂಗಳ ಕಾಲ ಸೇತುವೆ ಅಡಿಯಲ್ಲಿ ಶಾಂತಳಾಗಿ ಹರಿಯೋ ಭದ್ರೆ ಮಳೆಗಾಲದಲ್ಲಿ ಅಷ್ಟೆ ವೇಗವಾಗಿ ಸೇತುವೆ ಮೇಲೆ ಹರಿಯುತ್ತಾಳೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಬಾರದು ಎಂದರೆ ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಈ ಸೇತುವೆಯ ದುರಸ್ತಿ ಕಾರ್ಯ ಮಾಡಬೇಕಿದೆ.