ಚಿಕ್ಕಮಗಳೂರು: ಜಿಲ್ಲೆಯ ಕೆಲ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಮಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ತನಿಕೋಡಿನಿಂದ ಎಸ್.ಕೆ ಬಾರ್ಡರ್ವರೆಗೆ ಐದು ತಿಂಗಳ ಕಾಲ ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಕೆರೆಕಟ್ಟೆ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತದೆ ಹಾಗೂ ಈ ಮಾರ್ಗದ ಉಂಬಳಗೆರೆ, ಕೊರಕನಹಳ್ಳಿ, ಗುಲಗಂಜಿ ಮನೆ ಕಿರು ಸೇತುವೆಗಳು ಶಿಥಿಲಾವಸ್ಥೆ ತಲುಪಿವೆ. ತನಿಕೋಡಿನಿಂದ ಎಸ್.ಕೆ ಬಾರ್ಡರ್ವರೆಗೆ ಕಿರಿದಾದ ರಸ್ತೆ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವ ಕಾರಣ ಭಾರೀ ವಾಹನಗಳ ಸಂಚಾರ ಕಷ್ಟವಾಗುತ್ತದೆ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಜೂ. 15ರಿಂದ ಅ. 15ರವರೆಗೆ ನಿರ್ಬಂಧ ವಿಧಿಸಲಾಗಿದೆ.
ಇದರ ಬದಲಿ ಮಾರ್ಗವಾಗಿ ಚಿಕ್ಕಮಗಳೂರು ಕಡೆಯಿಂದ ಸಾಗುವ ವಾಹನಗಳು ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ–ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸಬಹುದಾಗಿದೆ. ಎನ್.ಆರ್.ಪುರ ಕಡೆಯಿಂದ ಸಾಗುವ ವಾಹನಗಳು ಕೊಪ್ಪ–ಹರಿಹರಪುರ–ಬಿದರಗೋಡು–ಆಗುಂಬೆ ಮಾರ್ಗವಾಗಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.