ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಟುಂಬದಿಂದ ಇಂದು ಶೃಂಗೇರಿ ಶಾರದಾ ಪೀಠದಲ್ಲಿ ಚಂಡಿಕಾ ಯಾಗ ನೆರವೇರಿತು. ಶೃಂಗೇರಿ ಪೀಠದಲ್ಲಿ ಬೆಳಗ್ಗೆ 9 ಗಂಟೆಯಿಂದ 12 ಗಂಟೆವರಗೆ ಯಾಗ ನಡೆಯಿತು. ಡಿ ಕೆ ಶಿವಕುಮಾರ್ ಮತ್ತು ಕುಟುಂಬಸ್ಥರು ಶನಿವಾರವೇ ಶೃಂಗೇರಿಗೆ ಆಗಮಿಸಿದ್ದರು. ಇಂದು ಯಾಗದ ಪೂರ್ಣಾವತಿಯಲ್ಲಿ ಡಿಕೆಶಿ ಕುಟುಂಬಸ್ಥರು ಭಾಗಿಯಾದರು.
3 ಗಂಟೆ 45 ನಿಮಿಷಗಳ ಕಾಲ ಶಕ್ತಿ ಪೀಠದಲ್ಲಿ 15 ಜನ ಋತ್ವಿಜರಿಂದ ಚಂಡಿಕಾ ಯಾಗ ನಡೆಯಿತು. ಚಂಡಿಕಾ ಯಾಗದ ಬಳಿಕ ಶೃಂಗೇರಿಯಲ್ಲಿ ಮಾತನಾಡಿದ ಡಿಕೆಶಿ, ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ. ಕಾರ್ಯಕರ್ತರ ಸ್ಫೂರ್ತಿ, ದೇವರ ಅನುಗ್ರಹದಿಂದ ಕಾಂಗ್ರೆಸ್ಗೆ ಹೊಸ ಶಕ್ತಿ ಬಂದಿದೆ. ನಿನ್ನೆಯೇ ಹೇಳಿದ್ದೇನೆ, ಮನಸ್ಸಿನ ಶಾಂತಿ, ನೆಮ್ಮದಿಗಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರ ಬರಬೇಕು, ಜನಸೇವೆ ಅವಕಾಶಕ್ಕಾಗಿ ಬೇಡಿಕೊಂಡಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿ ಎಲ್ಲರೂ ಪ್ರಚಾರ ಮಾಡುತ್ತಾರೆ. ಎಲ್ಲಾ ಕಡೆ ದೇವರ ದರ್ಶನ ಮಾಡಿದ್ದೇನೆ, ಆಶೀರ್ವಾದವಾಗಿದೆ. ದೇವರ ಸನ್ನಿಧಿಯಿಂದಲೇ ಪ್ರಚಾರ ಕೂಡ ಆರಂಭ ಮಾಡಿದ್ದೇನೆ ಎಂದು ಹೇಳಿದರು.
ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ. ವರುಣಾ ಮಾತ್ರವಲ್ಲ, ಯಾರೇ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಶಾಸಕರು, ಸಚಿವರು ಸಾಕ್ಷಿ ಬಿಟ್ಟು ಹೋಗಿದ್ದಾರೆ. ಈ ಬಾರಿ ನಮಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದರು. ಯಾಗದ ಬಳಿಕ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಡಿಕೆಶಿ ಮತ್ತು ಕುಟುಂಬಸ್ಥರು ತೆರಳಲಿದ್ದಾರೆ.