ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಫಿಹಣ್ಣು ಹುಲುಸಾಗಿ ಅರಳಿ ನಿಂತಿದೆ. ಆದರೆ ಕೊಯ್ಯೊರಿಲ್ಲದೆ, ಉದುರುತ್ತಿದೆ ಅನ್ನೋದೆ ದುರಂತ. ಕಾಫಿ ತೋಟ ಮಾಲೀಕರಂತೂ ಸಿಕ್ಕ ಕಾರ್ಮಿಕರಿಗೆಲ್ಲಾ ಸೌಲಭ್ಯ ಕಲ್ಪಿಸಿ ಅಡ್ವಾನ್ಸ್ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಆದರೆ ವಾರದ ಮೇಲೆ ಯಾರೂ ಒಂದೇ ಕಡೆ ಕೆಲಸ ಮಾಡುತ್ತಿಲ್ಲ. ಅಲ್ಲದೇ ಕಾಫಿ ಕೊಯ್ಲಿಗೆಂದು ನೀಡಿರುವ ಸಮಯವನ್ನು ದಂಧೆ ಮಾಡಿಕೊಂಡಿರುವುದು ವಿಪರ್ಯಾಸ.
ಅಸ್ಸೋಂ ವಲಸಿಗ ಕಾರ್ಮಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬರುವ ದಲ್ಲಾಳಿಗಳು 50 ಜನ ಕಾರ್ಮಿಕರನ್ನು ಇಟ್ಟುಕೊಂಡು 10 ಜನರನ್ನು ಒಬ್ಬರಿಗೆ ತೋರಿಸಿ 1 ಲಕ್ಷ ಅಡ್ವಾನ್ಸ್ ಪಡೆಯುತ್ತಾರೆ. ಅದೇ 10 ಜನರನ್ನು ಮತ್ತೊಬ್ಬರ ಬಳಿ ತೋರಿಸಿ 50 ಸಾವಿರ ಪಡೆಯುತ್ತಾರೆ. ಈ 10 ಜನ ಒಂದು ವಾರ ಕೆಲಸ ಮಾಡುತ್ತಾರೆ. ಮಾರನೇ ದಿನ ಹೇಳದೆ ಕೇಳದೆ ಮತ್ತೊಂದು ತೋಟಕ್ಕೆ ಹೋಗಿರುತ್ತಾರೆ. ಇದು ಬೆಳೆಗಾರರಿಗೆ ಬಿಸಿ ತುಪ್ಪವಾಗಿದೆ. ಹೀಗಾಗಿ ಕಾರ್ಮಿಕರು ಮತ್ತು ದಲ್ಲಾಳಿಗಳ ಮೇಲೆ ನಿಗಾ ಇಡಬೇಕೆಂದು ಕಾಫಿ ತೋಟ ಮಾಲೀಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸೂಕ್ತ ಕಾರ್ಮಿಕರು ಸಿಗದೆ ನಷ್ಟ: ಜಿಲ್ಲೆಯಲ್ಲಿ ಅರೇಬಿಕಾ ಮತ್ತು ರೋಬೋಸ್ಟ್ ಎರಡು ಸೇರಿ ಸುಮಾರು ಒಂದು ಲಕ್ಷ ಹೆಕ್ಟೇರ್ನಲ್ಲಿ ಕಾಫಿಯನ್ನು ಬೆಳೆಯಲಾಗಿದೆ. ವರ್ಷಪೂರ್ತಿ ಕಾಫಿತೋಟದ ನಿರ್ವಹಣೆಗೆ ಮತ್ತು ಕೊಯ್ಲಿಗೆಂದೇ ಸ್ಥಳೀಯ ಕಾರ್ಮಿಕರು ಇದ್ದಾರೆ. ಆದರೆ ನವೆಂಬರ್-ಡಿಸೆಂಬರ್ ಸಮಯದಲ್ಲಿ ಬೆಳೆ ಜಾಸ್ತಿಯಾಗುವುದರಿಂದ ಲಕ್ಷಾಂತರ ಕಾರ್ಮಿಕರು ಒಡಿಶಾ, ಅಸ್ಸೋಂನಿಂದ ಬರುತ್ತಾರೆ. ಇದುವೇ ಕಾಫಿತೋಟ ಮಾಲೀಕರಿಗೆ ದೊಡ್ಡ ತಲೆನೋವಾಗಿದೆ. ಸಾಲ- ಸೋಲ ಮಾಡಿ ಲಕ್ಷ ಲಕ್ಷ ಅಡ್ವಾನ್ಸ್ ಕೊಡುವ ಮಧ್ಯಮ ವರ್ಗದ ಬೆಳೆಗಾರರು ಕಾರ್ಮಿಕರಿಂದಲೇ ಮತ್ತಷ್ಟು ಸಮಸ್ಯೆಗೀಡಾಗುತ್ತಿದ್ದಾರೆ.
ಇದನ್ನೂ ಓದಿ:ಬಹುಧಾನ್ಯ ಮಿಶ್ರಿತ ಪುಷ್ಟಿಯಲ್ಲಿ ಹುಳುಗಳು ಪತ್ತೆ: ಮನಗೂಳಿ ಅಂಗನವಾಡಿ ಕಾರ್ಯಕರ್ತರ ವಿರುದ್ಧ ಪೋಷಕರ ಆಕ್ರೋಶ