ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನಲೆಯಲ್ಲಿ ಮತ್ತೆ ಒಂದೊಂದೇ ಅವಘಡ ಸಂಭವಿಸಲು ಶುರುವಾಗಿವೆ.ಕಳೆದ ವಾರವಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ಬೈಕ್ ಸವಾರ ಹೋಗುವ ವೇಳೆ ಸೇತುವೆ ಕುಸಿದು ಬಿದ್ದಿತ್ತು. ಇದರಿಂದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಇದೀಗ ಮತ್ತೆ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಿರು ಸೇತುವೆ ಪಕ್ಕದ ರಸ್ತೆ ಕುಸಿತವಾಗಿದೆ. ರಸ್ತೆ ಕುಸಿತದಿಂದ ವಾಹನಗಳ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳ - ಮುದ್ರೆ ಗ್ರಾಮದ ರಸ್ತೆ ಸಂಚಾರ ಬಂದ್ ಆಗಿದೆ.
ಭಾರೀ ಮಳೆಯಿಂದ ಈ ಹಿಂದೆಯೇ ಈ ರಸ್ತೆ ಶಿಥಿಲಾವಸ್ಥೆ ತಲುಪಿತ್ತು. ಈ ರಸ್ತೆ ಕುಸಿತದಿಂದಾಗಿ ಸಾರ್ವಜನಿಕರಿಗೆ ಸಂಚಾರ ಮಾಡಲು ಕಷ್ಟಕರವಾಗಿದೆ. ಪದೇ ಪದೇ ಈ ರೀತಿಯ ಘಟನೆ ಮಲೆನಾಡಿನಲ್ಲಿ ನಡೆಯುತ್ತಿದ್ದು, ಈಗಾಗಲೇ ಮಹಾ ಮಳೆಯಿಂದಾಗಿ ನಡೆದಿರುವ ಅವಾಂತರದಿಂದ ಮಲೆನಾಡಿನ ಜನರು ನೋದು ಹೋಗಿದ್ದಾರೆ. ಈಗ ಮತ್ತೆ ಈ ರೀತಿಯ ಅವಘಡ ನಡೆಯುತ್ತಿರೋದು ಮಲೆನಾಡು ಜನರ ನೆಮ್ಮದಿ ಹಾಳು ಮಾಡಿದೆ.