ಚಿಕ್ಕಮಗಳೂರು: ಎಲ್ಲ ಸೌಕರ್ಯವಿದ್ದೂ ಓದದೆ, ಸೋಮಾರಿಯಂತಿರುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಅಪ್ಪನ ದುಡ್ಡಲ್ಲಿ ಮಜಾ ಮಾಡುವ ಮಕ್ಕಳನ್ನೂ ನೋಡಿದ್ದೇವೆ. ಆದರೆ ತನ್ನ ಕಾಲ ಮೇಲೆ ನಿಂತು, ಸ್ವಾವಲಂಬನೆಯಿಂದ ವಿದ್ಯಾಭ್ಯಾಸ ಮಾಡುತ್ತಿರುವ ಈ ಹುಡುಗ ಇಂತಹವರಿಗೆ ಜೀವಂತ ಪಾಠವಾಗಿದ್ದಾನೆ.
ಈತನ ಹೆಸರು ಸಂಭ್ರಮ್. ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರ್ ಓದುತ್ತಿದ್ದಾನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ನಿವಾಸಿ. ಸಂಭ್ರಮ್ಗೆ ತಂದೆ ಇಲ್ಲ. ತಾಯಿ ಹಾಗೂ ಅಕ್ಕನೇ ಸರ್ವಸ್ವ. ವಾಸ ಮಾಡೋಕೆ ಸರಿಯಾದ ಸೂರಿಲ್ಲ. ತುತ್ತಿನ ಊಟಕ್ಕೂ ಹಾಹಾಕಾರ. ಇಂತಹ ಸಂಕಷ್ಟದಲ್ಲಿಯೂ ಮಗನನ್ನು ಎಂಜಿನಿಯರ್ ಮಾಡಬೇಕೆಂಬುದು ತಾಯಿಯ ಹೆಬ್ಬಯಕೆ!
ಕಿತ್ತು ತಿನ್ನುವ ಬಡತನದಲ್ಲಿ ಎಂಜಿನಿಯರಿಂಗ್ಗೆ ಹಣ ಹೊಂದಿಸೋದು ಸುಲಭದ ಮಾತಲ್ಲ. ಆದರೂ ತಾಯಿಯ ಆಸೆ ಈಡೇರಿಸಬೇಕೆಂದು ಪಣ ತೊಟ್ಟಿರುವ ಸಂಭ್ರಮ್ , ಸಂಜೆ ವೇಳೆ ಬೇಲ್ಪುರಿ ಮಾರಿ ಒಂದಿಷ್ಟು ಹಣ ಹೊಂದಿಸಿಕೊಳ್ಳುತ್ತಿದ್ದಾರೆ
ಡಿಪ್ಲೋಮೊ ಓದುವಾಗ ಸಂಭ್ರಮ್ ತಾಯಿ ಮಾಡಿಕೊಡುತ್ತಿದ್ದ ಸಮೋಸವನ್ನು ಸಂಜೆ ಮನೆಗೆ ಮನೆಗೆ ತೆರಳಿ ಮಾರುತ್ತಿದ್ದ. ಅದರಿಂದ ಸಂಗ್ರಹವಾಗಿದ್ದ ಅಲ್ಪ-ಸ್ವಲ್ಪ ಹಣದಿಂದ ಹಾಗೂ ಸ್ನೇಹಿತರು, ಬಂಧುಗಳ ಸಹಾಯದಿಂದ ಕಳೆದ ವರ್ಷ ಎಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ಗೆ ಸರ್ಕಾರಿ ಸೀಟು ಪಡೆದು, ಒಂದಿಷ್ಟು ಫೀಸ್ ಕಟ್ಟಿಕೊಂಡಿದ್ದಾನೆ. ಇದೀಗ ದ್ವೀತಿಯ ವರ್ಷದ ಎಂಜಿನಿಯರಿಂಗ್ ಓದುತ್ತಿರೋ ಸಂಭ್ರಮ್, ಬೇಲ್ಪುರಿ ಮಾರಿಕೊಂಡು ಹಣ ಕೂಡಿಡುತ್ತಿದ್ದಾನೆ
ಬೆಳಿಗ್ಗೆ ಕಾಲೇಜಿಗೆ ತೆರಳಿ, ಸಂಜೆಯಾಗುತ್ತಿದ್ದಂತೆಯೇ ಬೇಲ್ಪುರಿ ವ್ಯಾಪಾರ ಮಾಡುತ್ತಿದ್ದಾನೆ. ಮನೆ ಮನೆಗೆ ತೆರಳಿ ಬೇಲ್ಪುರಿ ಮಾರಿ ದಿನಕ್ಕೆ 400 ರಿಂದ 500 ರೂ ಸಂಪಾದಿಸುತ್ತಿದ್ದಾನೆ. ಸಂಭ್ರಮ್ ತುಂಬಾ ಚೆನ್ನಾಗಿ ಓದುತ್ತಿದ್ದಾನೆ. ಬಡತನದಿಂದ ಬಂದ ಹುಡುಗರು ಇಷ್ಟು ಚೆನ್ನಾಗಿ ಓದುತ್ತಿರೋದು ನಮಗೆ ಖುಷಿ, ನಮ್ಮ ಸಂಸ್ಥೆಗೂ ಹೆಮ್ಮೆ. ಸಂಭ್ರಮ್ ಥರದ ವಿದ್ಯಾರ್ಥಿಗಳಿಂದ ಕಾಲೇಜ್ ಕೂಡ ಸಂಭ್ರಮಿತ್ತದೆ ಎಂದೂ ಆತನ ಪ್ರಾಂಶುಪಾಲ ಡಾ.ಜಯದೇವ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.