ಚಿಕ್ಕಮಗಳೂರು: ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸಿಗೋಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 70 ಮಂದಿಗೆ ಸೋಂಕು ದೃಢಪಟ್ಟಿದೆ.
ಬಾಳೆಹೊನ್ನೂರು ಸಮೀಪದ ಸಿಗೋಡಿನಲ್ಲಿರುವ ವಿದ್ಯಾಲಯದಲ್ಲಿ ಮೊದಲು ಶಿಕ್ಷಕರೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 418 ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯ ಗಂಟಲು ಮತ್ತು ಮೂಗಿನ ದ್ರವವನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ 70 ಮಂದಿಯಲ್ಲಿ ಸೋಂಕು ತಗುಲಿದೆ. ಅದರಲ್ಲಿ 63 ವಿದ್ಯಾರ್ಥಿಗಳು, ಮೂವರು ಶಿಕ್ಷಕರು, ನಾಲ್ವರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
ಈ ಹಿಂದೆ ಶನಿವಾರ ಸುಮಾರು 40 ಮಂದಿಗೆ ಕೊರೊನಾ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾಲಯವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿತ್ತು.
ಕೊರೊನಾ ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲ. ಸೋಂಕಿತರಿಗೆ ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಸ್ಥಳಕ್ಕೆ ಡಿಎಚ್ಒ, ಸರ್ವೇಕ್ಷಣಾಧಿಕಾರಿ, ಆರೋಗ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.