ಚಿಕ್ಕಬಳ್ಳಾಪುರ: ಬೆಳಗ್ಗೆ ದೇವರ ಮೊರೆ ಹೋಗಿದ್ದ ವೀರಪ್ಪ ಮೊಯ್ಲಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಅಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ನಗರದ ಬಿಬಿ ರಸ್ತೆ ಹಾಗೂ ಶಿಡ್ಲಘಟ್ಟ ಸರ್ಕಾಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಿಡಿಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ವೀರಪ್ಪ ಮೊಯ್ಲಿಗೆ ರೋಡ್ ಶೋನಲ್ಲಿ ಸಾಥ್ ನೀಡಿದರು. ಈ ವೇಳೆ ಶಿವಶಂಕರ್ ರೆಡ್ಡಿ, ಸುಧಾಕರ್, ಸುಬ್ಬಾರೆಡ್ಡಿ, ಎಂಟಿಬಿ ನಾಗರಾಜ್, ವೆಂಕಟರಮಣಪ್ಪ ಇದ್ದರು.
ದೇವಸ್ಥಾನದ ಪ್ರಾರ್ಥನೆಯ ನಂತರ ಸುದ್ದಿಗೋಷ್ಠಿ ನಡೆಸಿದ ವೀರಪ್ಪ ಮೊಯ್ಲಿ, ಬಿಜೆಪಿ ಆಂಕಾಕ್ಷಿ ಬಚ್ಚೇಗೌಡರಿಗೆ ಯಲಹಂಕ ಶಾಸಕ ವಿಶ್ವನಾಥ್ ಮಾತ್ರ ಜೊತೆಯಾಗಿದ್ದು, ಈ ಬಾರಿಯೂ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಅಧಿಕಾರ ಬಂದ ಎರಡು ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ಬಡವರ ಕಣ್ಣೀರನ್ನ ಒರೆಸುವುದೇ ನಮ್ಮ ಮುಖ್ಯ ಧ್ಯೇಯ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಈಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಜೊತೆ ಎಲ್ಲಾ ಮಾತುಕತೆ ನಡೆಸಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಮಾತಾನಾಡಿದ ಸ್ಥಳೀಯ ಶಾಸಕ ಡಾ. ಸುಧಾಕರ್, ಈ ಬಾರಿಯೂ ಹ್ಯಾಟ್ರಿಕ್ ಸಾಧಿಸಲಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರು ಒಟ್ಟುಗೂಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಇನ್ನು ಸ್ಥಳೀಯ ಮಟ್ಟದಲ್ಲಿ ವೈಮನಸ್ಸು ಇರುವುದು ಸರ್ವೆ ಸಾಮಾನ್ಯ ಎಂದರು. ಒಕ್ಕಲಿಗರು ಜಾತಿಯನ್ನು ಆಧರಿಸಿ ಮತಗಳನ್ನು ನೀಡುವುದಿಲ್ಲ. ನೀತಿಯನ್ನು ಆಧರಿಸಿ ಮತಗಳನ್ನು ಹಾಕುತ್ತಾರೆಂದರು.