ಗುಡಿಬಂಡೆ: ತಾಲೂಕಿನ ಉಲ್ಲೋಡು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಲ್ಲೋಡು ಗ್ರಾಮಸ್ಥರು ಉಲ್ಲೋಡು ಗ್ರಾ.ಪಂ.ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ,ಮಾತನಾಡಿದ ಗ್ರಾಮದ ಯುವಕ ಮೂರ್ತಿ, ಕಳೆದ ಮೂರು ದಿನಗಳಿಂದ ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ವಾಟರ್ ಮ್ಯಾನ್ ಒಬ್ಬರನ್ನು ನೇಮಕ ಮಾಡುವಂತೆ ಒತ್ತಾಯಿಸುತ್ತಿದ್ದರೂ ಈ ಕುರಿತು ಗಮನಹರಿಸಿಲ್ಲ. ಜೊತೆಗೆ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಪಿಡಿಒ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕೊರೊನಾ ಸೋಂಕು ಹಬ್ಬುವುದರ ಜೊತೆಗೆ ಬೇರೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಗ್ರಾಮದಲ್ಲಿ ಉಂಟಾಗಿದೆ ಎಂದು ದೂರಿದರು.
ಈಗಾಗಲೇ ಕೊರೊನಾ ಸಂಬಂಧ ಗ್ರಾಮಮಟ್ಟದಲ್ಲಿ ಟಾಸ್ಕ್ಪೋರ್ಸ್ ಸಮಿತಿಗಳನ್ನು ರಚಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತಾರೆ. ಆದರೆ, ಇಲ್ಲಿಯವರೆಗೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಕ್ಕೆ ಹೊಸದಾಗಿ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ.
ಈ ಬಗ್ಗೆ ಕೇಳಿದರೆ ಬೇಜವಾಬ್ದಾರಿಯಾಗಿ ಉತ್ತರ ನೀಡುತ್ತಾರೆ. ಜೊತೆಗೆ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯದಲ್ಲಿನ ಗ್ರಂಥಪಾಲಕರು ಕೆಲಸಕ್ಕೆ ಬಾರದೇ ಇದ್ದರೂ ಅವರಿಗೆ ಹಣ ಪಾವತಿ ಸಹ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.