ಚಿಕ್ಕಬಳ್ಳಾಪುರ: ಪೆಟ್ರೋಲ್ ತುಂಬಿದ ಲಾರಿ ಚಾಲಕ ಕಂಠಪೂರ್ತಿ ಕುಡಿದು, ಹಸುಗಳಿಗೆ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಚಾಲಕನ ಅಜಾಗರೂಕತೆಗೆ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಆಂಧ್ರಪ್ರದೇಶದ ಚೇಳೂರು ಬಳಿ ಚಾಲಕ ಹಾಗೂ ಕ್ಲೀನರ್ ಮದ್ಯ ಸೇವನೆ ಮಾಡಿ, ಅಮಲಿನಲ್ಲೇ ಲಾರಿ ಚಲಾಯಿಸಿಕೊಂಡು ಬಂದಿದ್ದಾರೆ. ದೊಡ್ಡಕುರುಗೋಡು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹಸುಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಚಾಲಕನನ್ನ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪ್ಪಿತಪ್ಪಿ ಪೆಟ್ರೋಲ್ ಲಾರಿ ಪಲ್ಟಿಯಾಗಿದ್ದರೆ ಬಹುದೊಡ್ಡ ದುರಂತವೇ ಸಂಭವಿಸುತ್ತಿತ್ತು, ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.