ಗುಡಿಬಂಡೆ(ಚಿಕ್ಕಬಳ್ಳಾಪುರ): ಪಟ್ಟಣದ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದ್ರೂ ಕಸದ ರಾಶಿ. ಸಾಂಕ್ರಾಮಿಕ ರೋಗದ ಭೀತಿ ಈ ಪಟ್ಟಣದವರನ್ನು ದಿನಂಪ್ರತಿ ಕಾಡುತ್ತಿರುತ್ತದೆ. ಇಲ್ಲಿ ಸ್ವಚ್ಛತೆ ಭಾಗ್ಯ ಕಣ್ಮೆರೆಯಾಗಿದೆ. ಪಟ್ಟಣ ಸ್ವಚ್ಛಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ.
ಇಲ್ಲಿಯ ಪ್ರಮುಖ ವೃತ್ತ ಹಾಗೂ ರಸ್ತೆ ಪಕ್ಕದ ಚರಂಡಿಗಳು ಕಸದಿಂದ ತುಂಬಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ನಾಗರಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಇನ್ನೊಂದೆಡೆ ಸಂಗ್ರಹಿಸಿದ ಕಸವನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡದ ಕಾರಣ ರಸ್ತೆ ಬದಿಯಲ್ಲಿ ಕಸ ತುಂಬಿ ತುಳುಕುತ್ತಿದೆ.
ಕೆಲ ವಾರ್ಡ್ಗಳಲ್ಲಿ ಚರಂಡಿಗಳೇ ಇಲ್ಲ. ಇದ್ದರೂ ಸಂಪೂರ್ಣ ಮಣ್ಣಿನಿಂದ ತುಂಬಿ ಕಣ್ಮರೆಯಾಗಿದೆ. ಚರಂಡಿ ಯಾವುದೋ, ರಸ್ತೆ ಯಾವುದೋ ಎನ್ನುವುದು ತಿಳಿಯುತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.