ಚಿಕ್ಕಬಳ್ಳಾಪುರ: 'ಸರ್ಕಾರಿ ಶಿಕ್ಷಕನಾಗಿ ಅನುಮೋದನೆ ಮಾಡಿಕೊಳ್ಳದ ಖಾಸಗಿ ಆಡಳಿತ ಮಂಡಳಿ ನನ್ನ ಸಾವಿಗೆ ಕಾರಣ' ಎಂದು ಬ್ಲಾಕ್ ಬೋರ್ಡ್ ಮೇಲೆ ಬರೆದು ಶಿಕ್ಷಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದೆ.
ವಿವರ:
ತಾಲೂಕಿನ ಕನಗಾನಕೊಪ್ಪ ಗ್ರಾಮದ ನಿವಾಸಿ ಚಂದ್ರಶೇಖರ್ ಬಿನ್ ಕೃಷ್ಣಪ್ಪ (25) ಮೃತಪಟ್ಟ ಶಿಕ್ಷಕ ಎಂದು ತಿಳಿದು ಬಂದಿದೆ. ಮಂಚೇನಹಳ್ಳಿಯ ಆಚಾರ್ಯ ಸಂಯುಕ್ತ ಪ್ರೌಢಶಾಲೆಯಲ್ಲಿ ಕಳೆದೆರಡು ವರ್ಷಗಳಿಂದ ಶೈಕ್ಷಣಿಕ ವರ್ಷಕ್ಕೆ ಸೀಮಿತವಾದಂತೆ ಗೆಸ್ಟ್ ಟೀಚರ್ ಆಗಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಇವರನ್ನು ಗೆಸ್ಟ್ ಟೀಚರ್ ಆಗಿ ತೆಗೆದುಕೊಂಡಿಲ್ಲ. ಹೀಗಾಗಿ ಇವರು ತಮ್ಮ ಜೀವನೋಪಾಯಕ್ಕಾಗಿ ಮಂಚೇನಹಳ್ಳಿಯ ಅನಿಲ್ ಕುಮಾರ್ ಎಂಬುವರ ಮನೆಯನ್ನು ಬಾಡಿಗೆ ತೆಗೆದುಕೊಂಡು ಟ್ಯೂಷನ್ ನಡೆಸುತ್ತಿದ್ದರು.
ನಿನ್ನೆ (ಶುಕ್ರವಾರ) ಸಂಜೆ 7-00 ಗಂಟೆ ಸಮಯದಲ್ಲಿ ಟ್ಯೂಷನ್ ರೂಂನ ಬ್ಲಾಕ್ ಬೋರ್ಡ್ ಮೇಲೆ 'ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ನನ್ನೆಲ್ಲಾ ಪ್ರೀತಿಪಾತ್ರರಲ್ಲಿ ಕ್ಷಮೆಯಾಚಿಸುತ್ತೇನೆ. ಖಾಸಗಿ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ ನನ್ನ ಸೇವೆಯನ್ನು ಗುರುತಿಸಿ ಸರ್ಕಾರಿ ಶಿಕ್ಷಕನಾಗಿ ಅನುಮೋದನೆ ಮಾಡಿಕೊಳ್ಳದ ಆಚಾರ್ಯ ಪ್ರೌಢಶಾಲೆ ಮಂಚೇನಹಳ್ಳಿ ಆಡಳಿತ ಮಂಡಳಿಯವರೇ ನನ್ನ ಸಾವಿಗೆ ಕಾರಣ' ಎಂದು ಬರೆದು ನೇಣಿಗೆ ಶರಣಾಗಿದ್ದಾರೆ.
ಓದಿ: 4ನೇ ಮಗು ಹೆಣ್ಣೆಂದು ತಿಳಿದು ಆತ್ಮಹತ್ಯೆ ಮಾಡ್ಕೊಂಡ ತಂದೆ
ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.